ಮಾಜಿ ಸಚಿವ ಸೋಮಣ್ಣ ದೂರು: ವಿಜಯೇಂದ್ರ ಆಪ್ತ ರುದ್ರೇಶ್‌ಗೆ ಬಿಜೆಪಿ ನೋಟಿಸ್‌

ರಾಮನಗರ ಬಿಜೆಪಿ ಮುಖಂಡರಾಗಿರುವ ರುದ್ರೇಶ್ ಅವರಿಗೆ ಬಿಜೆಪಿ ರಾಜ್ಯ ಶಿಸ್ತು ಸಮಿತಿ, ಎರಡು ದಿನಗಳ ಹಿಂದೆ ನೊಟೀಸ್ ಜಾರಿ ಮಾಡಿದೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ವಿ.ಸೋಮಣ್ಣ ವಿರುದ್ಧ ರುದ್ರೇಶ್‌ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಕೇಳಿಬಂದಿತ್ತು
ವಿಜಯೇಂದ್ರ ಮತ್ತು ಎಂ ರುದ್ರೇಶ್
ವಿಜಯೇಂದ್ರ ಮತ್ತು ಎಂ ರುದ್ರೇಶ್

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯ ನಾಯಕರು ಬಹಿರಂಗವಾಗಿ ಮಾತನಾಡುತ್ತಿರುವ ಹಿನ್ನೆಲೆಯಲ್ಲಿ ಶುರುವಾಗಿರುವ ನೋಟಿಸ್‌ ಪಾಲಿಟಿಕ್ಸ್‌ ಮುಂದುವರಿದಿದೆ. ರಾಮನಗರ ಬಿಜೆಪಿ ಮುಖಂಡರಾಗಿರುವ ರುದ್ರೇಶ್ ಅವರಿಗೆ ಬಿಜೆಪಿ ರಾಜ್ಯ ಶಿಸ್ತು ಸಮಿತಿ, ಎರಡು ದಿನಗಳ ಹಿಂದೆ ನೊಟೀಸ್ ಜಾರಿ ಮಾಡಿದೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ವಿ.ಸೋಮಣ್ಣ ವಿರುದ್ಧ ರುದ್ರೇಶ್‌ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸೋಮಣ್ಣ ಅವರು ಪಕ್ಷದ ನಾಯಕರಿಗೆ ದೂರು ನೀಡಿದ್ದರು. ಜತೆಗೆ ಪಕ್ಷದ ಚಾಮರಾಜನಗರ ಜಿಲ್ಲಾ ಘಟಕದಿಂದಲೂ ಮಾಹಿತಿ ನೀಡಲಾಗಿತ್ತು.

ವಿಧಾನಸಭೆ ಚುನಾವಣೆ ವೇಳೆ ಮಾಜಿ ಸಚಿವ ವಿ. ಸೋಮಣ್ಣ ಅವರ ವಿರುದ್ಧ ಎಂ ರುದ್ರೇಶ್‌ ಪತ್ರಿಕಾಗೋಷ್ಠಿ ನಡೆಸಿದ್ದರು. ರುದ್ರೇಶ್‌ ಅವರು ಚಾಮರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿ ಹೈಕಮಾಂಡ್‌ ಸೋಮಣ್ಣ ಅವರಿಗೆ ಚಾಮರಾಜನಗರದ ಟಿಕೆಟ್‌ ನೀಡಿತ್ತು.

 ಆದರೆ, ಚಾಮರಾಜ ನಗರದ ಮೇಲೆ ಕಣ್ಣಿಟ್ಟಿದ್ದ ರುದ್ರೇಶ್‌ ಇದರಿಂದ ಕೆರಳಿದ್ದರು. ಚಾಮರಾಜನಗರದಲ್ಲಿ ಪತ್ರಿಕಾಗೋಷ್ಠಿ ಮಾಡಿ ಸೋಮಣ್ಣ ವಿರುದ್ಧ ವಾಗ್ದಾಳಿ ಮಾಡಿದ್ದರು. ಈ ರೀತಿ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದ ರುದ್ರೇಶ್‌ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಪಕ್ಷದ ವೇದಿಕೆಯಲ್ಲಿ ಪ್ರಶ್ನೆ ಮಾಡಿದ್ದರು. ಇದೀಗ ಬಿಜೆಪಿಯ ಶಿಸ್ತು ಸಮಿತಿ ರುದ್ರೇಶ್‌ ಅವರಿಗೆ ಕಾರಣ ಕೇಳಿ ನೋಟಿಸ್‌ ನೀಡಿದೆ. ಒಂದು ವಾರದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿದೆ.

ರುದ್ರೇಶ್ ಅವರು ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರ ಆಪ್ತರಾಗಿದ್ದು ಕೆ.ಆರ್‌ಡಿಸಿಎಲ್‌ ಅಧ್ಯಕ್ಷರೂ ಆಗಿದ್ದರು. ಸೋಮಣ್ಣ ಮತ್ತು ಯಡಿಯೂರಪ್ಪ ಅವರ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎಂಬಂತಾಗಿತ್ತು. ಈ ಪರಿಸ್ಥಿತಿಯಲ್ಲಿ ರುದ್ರೇಶ್‌ ವಾಗ್ದಾಳಿ ನಡೆಸಿದ್ದು ಬೇರೆ ಬೇರೆ ಸಂದೇಶಗಳನ್ನು ನೀಡಿತ್ತು. ಚಾಮರಾಜ ನಗರ ಕ್ಷೇತ್ರದಲ್ಲಿ ರುದ್ರೇಶ್‌ ಅವರು ಕಾಂಗ್ರೆಸ್‌ಗೆ ಸಹಕಾರ ನೀಡಿ ಸೋಮಣ್ಣ ಅವರನ್ನು ಸೋಲಿಸಿದರು ಎಂಬ ಆಪಾದನೆಗಳೂ ಕೇಳಿಬಂದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com