ಬೆಂಗಳೂರು: ವರ್ಗಾವಣೆ ದಂಧೆ ತಾರಕಕ್ಕೇರಿದೆ. ಶಾಸಕರ ಭವನ, ಕುಮಾರಕೃಪಾ ಮತ್ತು ಇತರ ಕಡೆಗಳಲ್ಲಿ ಹಗಲು ರಾತ್ರಿ ಎನ್ನದೇ ವರ್ಗಾವಣೆ ಮಾಡಿಸಿಕೊಳ್ಳಲು ಜನಜಂಗುಳಿ ಇರುತ್ತದೆ. ಕೇವಲ ಒಂದು ತಿಂಗಳಲ್ಲೇ ಸಿದ್ದರಾಮಯ್ಯ ಸರ್ಕಾರ ಅಪಖ್ಯಾತಿಗೆ ಒಳಗಾಗಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ ಹರಿಹಾಯ್ದಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಧಾನಸೌಧದ ಸುತ್ತ ಜನವೋ ಜನ ತುಂಬಿ ತುಳುಕುತ್ತಿದೆ. ಏಜೆಂಟ್‌ಗಳು ಫುಲ್ ಬ್ಯುಸಿಯಾಗಿದ್ದಾರೆ. ಏಜೆಂಟರು ಎಷ್ಟು ಬ್ಯೂಸಿ ಇದ್ದಾರೆ ಅಂದ್ರೆ ಮಂತ್ರಿಗಳೇ ನಿಲ್ಲಿಸಿದ್ರೂ ನಿಲ್ಲಲ್ಲ, ಅಷ್ಟು ಸ್ಪೀಡಾಗಿದ್ದಾರೆ. ಇವರಿಂದ ಸ್ವಚ್ಛ ಆಡಳಿತ ನಿರೀಕ್ಷಿಸಲಾಗುತ್ತಾ? ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಮೇಲಧಿಕಾರಿಗಳ ಹಫ್ತಾ ವಸೂಲಿಗಾಗಿ ನೀಡುತ್ತಿರುವ ಕಿರುಕುಳದಿಂದ ಒತ್ತಡ ಸಹಿಸಲಾಗದೇ ಕಲಬುರಗಿಯಲ್ಲಿ ಪೊಲೀಸ್ ಪೇದೆಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೂ ನಡೆದಿದೆ ಎಂದರು. ವರ್ಗಾವಣೆ ದಂಧೆ ಯಾವುದೇ ಭಯವಿಲ್ಲದೇ ಮುಕ್ತವಾಗಿ ನಡೆಯುತ್ತಿದೆ. ಅಷ್ಟೇ ಅಲ್ಲ ವರ್ಗಾವಣೆ ಮಾರುಕಟ್ಟೆಯನ್ನೇ ಸೃಷ್ಟಿಸಿದ್ದಾರೆ. ಶಾಸಕರ ಭವನದಲ್ಲಿ ಶಾಸಕರಲ್ಲದವರು ಕುಳಿತು ವ್ಯವಹಾರ ನಡೆಸುತ್ತಿದ್ದಾರೆ.
ಭ್ರಷ್ಟಾಚಾರ ಸಾಂಸ್ಥೀಕರಣ ಆಗಿದೆ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿದ್ದೀರಿ. ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಿ, ಅದರ ಹಲ್ಲುಗಳನ್ನು ಕಿತ್ತು ಹಾಕಿ ಎಸಿಬಿ ತೆರೆದದ್ದು ಯಾರು? ಎಸಿಬಿ ಮಾಡಿದ್ದರಿಂದಲೇ ಭ್ರಷ್ಟಾಚಾರ ಹೆಚ್ಚಾಯಿತು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು. ಇದು ಯಾರು ಮಾಡಿದ್ದು ಎಂದು ಬೊಮ್ಮಾಯಿ ಪ್ರಶ್ನಿಸಿದರು.
ನಿಜವಾಗಲೂ ನಿಮಗೆ ಭ್ರಷ್ಟಾಚಾರ ನಿಗ್ರಹ ಮಾಡುವ ಇಚ್ಛಾಶಕ್ತಿ ಇದ್ದರೆ ನಿಮ್ಮ ಕಾಲದ ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ತನಿಖೆ ಮಾಡಿಸಿ. ಆದ್ದರಿಂದ, 2013 ರಿಂದ 2023 ರವರೆಗಿನ ಎಲ್ಲ ದೂರುಗಳ ಬಗ್ಗೆ ತನಿಖೆ ಆಗಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದರು.
ಅನ್ನಭಾಗ್ಯದಡಿ ವಿತರಿಸುವ ಅಕ್ಕಿ ಕಾಳಸಂತೆಯ ಪಾಲಾಗುತ್ತಿದ್ದು ಹೊಟೇಲ್‌ಗಳಲ್ಲಿ ಬಳಸಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಈ ಹಿಂದೆ ಸರ್ಕಾರವೇ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಈ ಅಕ್ಕಿಯನ್ನು ಪಾಲಿಶ್ ಮಾಡಿ ಮುಕ್ತ ಮಾರುಕಟ್ಟೆಯಲ್ಲಿ ಮಾರಲಾಗುತ್ತಿದೆ. ಹೊಟೇಲ್‌ಗಳಲ್ಲಿ ಇಡ್ಲಿ ದೋಸೆಗೆ ಬಳಸಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ನಷ್ಟವಾಗುತ್ತಿದೆ. ಆದ್ದರಿಂದ ಅಕ್ಕಿ ಕಾಳಸಂತೆಗೆ ಹೋಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
Advertisement