ಏ ರೇವಣ್ಣ... ನಿಂಬೆ ಹಣ್ಣು ಹಿಡಿದುಕೊಳ್ಳುವ ಕೈಯಲ್ಲಿ ಕೊಬ್ಬರಿ ಏಕೆ?: ಸಿಎಂ ಸಿದ್ದರಾಮಯ್ಯ ಪ್ರಶ್ನೆಗೆ ಸದನದಲ್ಲಿ ನಗು

ಏ ರೇವಣ್ಣ ನಿಂಬೆ ಹಣ್ಣು ಹಿಡಿದುಕೊಳ್ಳುವ ಕೈಯಲ್ಲಿ ಕೊಬ್ಬರಿ ಏಕೆ ಹಿಡಿದುಕೊಂಡಿದ್ಯಾ? ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಪ್ರಶ್ನಿಸಿದ್ದಕ್ಕೆ ಸದನ ನಗೆಗಡಲಲ್ಲಿ ತೇಲಿದ್ದು ವಿಶೇಷವಾಗಿತ್ತು.
ಸಿದ್ದರಾಮಯ್ಯ - ರೇವಣ್ಣ
ಸಿದ್ದರಾಮಯ್ಯ - ರೇವಣ್ಣ

ಬೆಂಗಳೂರು: ಏ ರೇವಣ್ಣ ನಿಂಬೆ ಹಣ್ಣು ಹಿಡಿದುಕೊಳ್ಳುವ ಕೈಯಲ್ಲಿ ಕೊಬ್ಬರಿ ಏಕೆ ಹಿಡಿದುಕೊಂಡಿದ್ಯಾ? ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಪ್ರಶ್ನಿಸಿದ್ದಕ್ಕೆ ಸದನ ನಗೆಗಡಲಲ್ಲಿ ತೇಲಿದ್ದು ವಿಶೇಷವಾಗಿತ್ತು.

ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರು ಇಂದು ಕೊಬ್ಬರಿ ಹಿಡಿದುಕೊಂಡು ಕಲಾಪಕ್ಕೆ ಆಗಮಿಸಿ ಸದನದ ಗಮನ ಸೆಳೆದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಏ ರೇವಣ್ಣ ನಿಂಬೆ ಹಣ್ಣು ಹಿಡಿದುಕೊಳ್ಳುವ ಕೈಯಲ್ಲಿ ಕೊಬ್ಬರಿ ಏಕೆ ಹಿಡಿದುಕೊಂಡಿದ್ಯಾ? ಎಂದು ಹಾಸ್ಯ ಚಟಾಕಿ ಹಾರಿಸಿದರು.

ಇಂದು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಲು ಸಿಎಂ ಸಿದ್ದರಾಮಯ್ಯ ಮುಂದಾದಾಗ, ರೇವಣ್ಣ ಅವರು ಎದ್ದು ನಿಂತು ಕೊಬ್ಬರಿ ಬೆಳೆಗೆ ಬೆಲೆ ಏರಿಕೆ ಮಾಡಬೇಕು. ಕೊಬ್ಬರಿ ಬೆಲೆ ಏರಿಕೆ ಮಾಡುವುದಾಗಿ ಡಿಸಿಎಂ ಹೇಳಿಕೆ ಕೊಟ್ಟಿದ್ದಾರೆ. ಅದನ್ನು ಮಾಡಬೇಕು ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ಅವರು ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 15,000 ರೂಪಾಯಿಗೆ ಏರಿಕೆ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಅದನ್ನು ಈಡೇರಿಸಬೇಕು ಎಂದು ರೇವಣ್ಣ ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕನಿಷ್ಠ ರೇವಣ್ಣಗಾಗಿ ಕೊಬ್ಬರಿ ದರ ಏರಿಕೆ ಮಾಡಬೇಕು ಎಂದು ಹೇಳಿದರು.

ರೇವಣ್ಣ ನನಗೆ ಒಳ್ಳೆಯ ಸ್ನೇಹಿತ ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ, ಕುಮಾರಣ್ಣ ಏನು ಎಂದು ಕೆಲವು ಸದಸ್ಯರು ಪ್ರಶ್ನಿಸಿದರು. ಇದೇ ವೇಳೆ, ಸಿದ್ದರಾಮಯ್ಯ, ರೇವಣ್ಣನವರದ್ದು ವಿಶೇಷ ಪ್ರೀತಿ ಎಂದು ಬಿಜೆಪಿಯ ಆರ್ ಅಶೋಕ ಹೇಳಿದರು. 

ಸಿದ್ದರಾಮಯ್ಯ ವಿರುದ್ಧ ಶಾಸಕ ಎಚ್​​ಡಿ ರೇವಣ್ಣ ಪ್ರಚಾರಕ್ಕೆ ಬರಲಿಲ್ಲ. ಸಿದ್ದರಾಮಯ್ಯ ವಿರುದ್ಧ ಪ್ರಚಾರಕ್ಕೆ ಮನೆಯಿಂದ ಹೊರಗೇ ಬರಲಿಲ್ಲ ಎಂದು ಅಶೋಕ್ ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹೊಳೆನರಸೀಪುರ ಕಡೆ ಸಿದ್ದರಾಮಯ್ಯ ಹೋಗಲೇ ಇಲ್ಲ ಎಂದರು. ಆಗ ಮಧ್ಯ ಪ್ರವೇಶಿಸಿದ ಜಿಟಿ ದೇವೇಗೌಡ, ಅವರಿಬ್ಬರದ್ದು 35 ವರ್ಷಗಳ ಸ್ನೇಹ ಎಂದರು. ಅಷ್ಟರಲ್ಲಿ ಮಾತು ಮುಂದುವರಿಸಿದ ಸಿದ್ದರಾಮಯ್ಯ, ನೀವೆಲ್ಲರೂ ಹೇಳಿದ್ದು ಸತ್ಯ, ರೇವಣ್ಣ ಮೇಲೆ ವಿಶೇಷವಾದ ಪ್ರೀತಿ ಇದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com