ಸಿಎಂ ಮಾಡೋದು, ಗೊತ್ತು, ಇಳಿಸೋದು ಗೊತ್ತು: ಬಿಕೆ ಹರಿಪ್ರಸಾದ್ ಹೇಳಿಕೆಗೆ ಡಿಸಿಎಂ ಡಿಕೆಶಿ ಪ್ರತಿಕ್ರಿಯೆ ಹೇಗಿತ್ತು ಅಂದರೆ...
ಬೆಂಗಳೂರು: ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತಿದೆ. ನಾನು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ ಎಂಬ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಅವರ ಹೇಳಿಕೆ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಕಾರಣದಲ್ಲಿ ಎಲ್ಲ ಸಮಾನರು, ಯಾವ ಅಸಮಾಧಾನವೂ ಇಲ್ಲ, ಯಾವ ಸಮುದಾಯವನ್ನೂ ತುಳಿಯುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಮಾಡುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
"ಬಿ.ಕೆ. ಹರಿಪ್ರಸಾದ್ ಅವರು ಏನು ಹೇಳಿದ್ದಾರೆ ಎಂಬುದು ನನಗೆ ಸರಿಯಾಗಿ ಗೊತ್ತಿಲ್ಲ, ಹೀಗಾಗಿ ಆ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಅದರ ಬಗ್ಗೆ ವಿಚಾರಿಸಿ ಮಾತನಾಡುತ್ತೇನೆ" ಎಂದು ಡಿಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಮಾಡೋದು, ಇಳಿಸೋದು ಗೊತ್ತು ಎಂದು ಬಿ ಕೆ ಹರಿಪ್ರಸಾದ್ ಹೇಳಿದ್ದಾರಲ್ಲ ಎಂಬ ಪ್ರಸ್ತಾಪಕ್ಕೆ ಡಿಸಿಎಂ ಹೀಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಹಾಲಿನ ಬೆಲೆ ಏರಿಕೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ಹಾಲಿನ ದರ ಹೆಚ್ಚಳದ ವಿಚಾರಕ್ಕೆ ಬಂದರೆ ನಾನು ರೈತನ ಮಗ, ಪಶು ಆಹಾರ, ಹಾಲಿನ ಉತ್ಪಾದನಾ ವೆಚ್ಚ ಎಲ್ಲ ಜಾಸ್ತಿಯಾಗಿದೆ. ಹೀಗಾಗಿ 5 ರೂಪಾಯಿ ಹೆಚ್ಚಳ ಮಾಡಬೇಕು ಎಂದು ನಾನೇ ದೊಡ್ಡಬಳ್ಳಾಪುರದಲ್ಲಿ ಭಾಷಣ ಮಾಡಿದ್ದೇ. ಹಾಲು ಒಕ್ಕೂಟದವರು ಸಹ ಪ್ರಸ್ತಾಪ ಮಾಡಿದ್ದರು. ಎಲ್ಲ ಚರ್ಚೆ ಮಾಡಿ 3 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹೆಚ್ಚಿನ ಹಣ ರೈತನಿಗೆ ಸೇರಬೇಕು. ಈಗಲೂ ಸಹ ನಷ್ಟವಾಗುತ್ತಿದೆ. ಆದರೂ ಸರಿದೂಗಿಸಿಕೊಂಡು ಹೋಗಬೇಕಲ್ಲ. ಬೆಲೆ ಹೆಚ್ಚಳ ಎಂದು ಬಿಜೆಪಿಯವರು ಟೀಕೆ ಮಾಡಲಿ, ಅವರು ಇರೋದೇ ಟೀಕೆ ಮಾಡೋಕೆ" ಎಂದು ತಿಳಿಸಿದರು.
ಪಿಎಸ್ಐ ಹಗರಣ ನ್ಯಾಯಾಂಗ ತನಿಖೆ ಕುರಿತು ಪ್ರಶ್ನಿಸಿದಾಗ, "ಪಿಎಸ್‌ಐ ಹಗರಣದ ಬಗ್ಗೆ ನಾವು ಹಿಂದೆ ಹೋರಾಟ ಮಾಡಿದ್ದೆವು, ಸರ್ಕಾರ ಈಗ ತನಿಖೆಗೆ ಒಳಪಡಿಸಿದೆ. ನಾವು ಸುಮ್ಮನೆ ಇದ್ದರೂ ಅವರೇ ಕೇಳ್ತಾ ಇದ್ದರು. ಎರಡು ದಿನದ ಹಿಂದೆ ಸಿಎಂ ಅವರನ್ನು ಕೇಳಿದ್ದಾರೆ, ಎರಡು ತಿಂಗಳಾಯಿತು ಎಂದು. ಒಂದೊಂದೆ ಕೆಲಸ ಮಾಡುತ್ತಾ ಹೋಗುತ್ತೇವೆ. ಬಿಜೆಪಿಯವರ ಕೈಯಲ್ಲೆ ಅಧಿಕಾರ ಇತ್ತಲ್ಲ, ಆಗ ಆವರೇನು ಮಾಡಿದರು. ಸೋರಿಕೆ ತಡೆಯಬಹುದಿತ್ತಲ್ಲವೇ? ಅಶ್ವಥನಾರಾಯಣ ಅವರ ಸೋರಿಕೆಯನ್ನು ಹೊರಗೆ ತೆಗೆಯಲೇ?" ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ