ರಾಜ್ಯ ಕಾಂಗ್ರೆಸ್ ನಲ್ಲಿ ಆಂತರಿಕ ಕಿತ್ತಾಟ: ಬಿಕೆ ಹರಿಪ್ರಸಾದ್ ವಿರುದ್ಧ ಕ್ರಮಕ್ಕೆ ಸಿದ್ದರಾಮಯ್ಯ ಬೆಂಬಲಿಗರ ಒತ್ತಾಯ

'ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತಿದೆ' ಎಂದು ಹೇಳಿಕೆ ನೀಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ವಿರುದ್ಧ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬೆಂಬಲಿಗರು ಒತ್ತಾಯಿಸುವುದರೊಂದಿಗೆ ರಾಜ್ಯ ಕಾಂಗ್ರೆಸ್ ನಲ್ಲಿ ಆಂತರಿಕ ಕಿತ್ತಾಟ ಬಯಲಾಗಿದೆ.
ಬಿಕೆ ಹರಿಪ್ರಸಾದ್, ಸಿಎಂ ಸಿದ್ದರಾಮಯ್ಯ
ಬಿಕೆ ಹರಿಪ್ರಸಾದ್, ಸಿಎಂ ಸಿದ್ದರಾಮಯ್ಯ

ಬೆಂಗಳೂರು: 'ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತಿದೆ' ಎಂದು ಹೇಳಿಕೆ ನೀಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ವಿರುದ್ಧ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬೆಂಬಲಿಗರು ಒತ್ತಾಯಿಸುವುದರೊಂದಿಗೆ ರಾಜ್ಯ ಕಾಂಗ್ರೆಸ್ ನಲ್ಲಿ ಆಂತರಿಕ ಕಿತ್ತಾಟ ಬಯಲಾಗಿದೆ.

ಹರಿಪ್ರಸಾದ್ ಅವರ ಹೇಳಿಕೆ ವಿವಾದ ಹುಟ್ಟುಹಾಕಿದ್ದು, ಅವರನ್ನು ಪರಿಷತ್ ವಿಪಕ್ಷ ನಾಯಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸಿದ್ದರಾಮಯ್ಯ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ.

ಈ ಮಧ್ಯೆ ಗೃಹ ಸಚಿವ ಡಾ.ಜಿ.ಪರಮೇಶ್ವರ್  ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಸುದ್ದಿಗಾರರು ಹರಿಪ್ರಸಾದ್ ಅವರನ್ನೇ ಕೇಳಲಿ ಎಂದು ಹೇಳಿದ್ದಾರೆ. ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಹರಿಪ್ರಸಾದ್ ಈ ರೀತಿಯಾಗಿ ಏನನ್ನೂ ಹೇಳಿಲ್ಲ ಎಂದು ಹೇಳಿದ್ದಾರೆ.

ಹಿರಿಯ ನಾಯಕರು ಈ ವಿಚಾರದಲ್ಲಿ ಯಾವುದೇ ನಿಲುವು ತಳೆಯದಿರುವುದು ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಬಲದ ಕ್ಷೀಣತೆ ಕಂಡುಬಂದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಆ ಪಕ್ಷದವರೇ ಹೇಳುತ್ತಿದ್ದಾರೆ.  ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಸಿಎಂ ಹುದ್ದೆ ಕೈ ತಪ್ಪಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2.5 ವರ್ಷಗಳ ನಂತರ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಅವರ ಬೆಂಬಲಿಗರು ಸಮರ್ಥಿಸಿಕೊಳ್ಳುತ್ತಿದ್ದಾರೆ. 

ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾದ ವಸತಿ ಸಚಿವ ಬಿ. ಜಮೀರ್ ಅಹ್ಮದ್ ಖಾನ್ ಮತ್ತು ಎನ್.ಚೆಲುವರಾಯಸ್ವಾಮಿ ಸಿಎಂ ಪರ ಬ್ಯಾಟಿಂಗ್ ಮಾಡಿ ಹರಿಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹರಿಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ನೋಟಿಸ್ ಕಳುಹಿಸಬೇಕು ಎಂದು ಸಿದ್ದರಾಮಯ್ಯ ಬೆಂಬಲಿಗರು ಪಕ್ಷವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಕೆಪಿಸಿಸಿ ಕಾರ್ಯದರ್ಶಿ ವರುಣಾ ಮಹೇಶ್, ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತನಾಡಿರುವ ಹರಿಪ್ರಸಾದ್ ಅವರಿಗೆ ನೋಟಿಸ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಹರಿಪ್ರಸಾದ್ ಅವರು ಹೈಕಮಾಂಡ್ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಗಾಂಧಿ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸುಲಭವಲ್ಲ ಎಂದು ಮೂಲಗಳು ವಿವರಿಸುತ್ತವೆ.

ಹರಿಪ್ರಸಾದ್ ಕೂಡ ಒಬಿಸಿ ವರ್ಗದಲ್ಲಿ ಬರುವ ಪ್ರಭಾವಿ ಈಡಿಗ ಸಮುದಾಯಕ್ಕೆ ಸೇರಿದವರು. ಆರ್‌ಎಸ್‌ಎಸ್, ಹಿಂದುತ್ವ ಮತ್ತು ಬಿಜೆಪಿ ವಿರುದ್ಧ ಅವರ ಫೈರ್‌ಬ್ರಾಂಡ್ ಭಾಷಣಗಳು ಎಲ್ಲರಿಗೂ ತಿಳಿದಿವೆ. ಹರಿಪ್ರಸಾದ್ ಅವರಿಗೆ ನೋಟಿಸ್ ನೀಡಿರುವ ಬಗ್ಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಇದುವರೆಗೂ ಹೇಳಿಕೆ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com