ಚಿಕ್ಕಬಳ್ಳಾಪುರದಲ್ಲಿ ಗೂಂಡಾಗಿರಿ ರಾಜಕಾರಣ: ಡಾ. ಕೆ.ಸುಧಾಕರ್ ಗೆ ಪ್ರದೀಪ್ ಈಶ್ವರ್ ತಿರುಗೇಟು

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹಾಲಿ ಶಾಸಕರು ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ರೌಡಿ ರಾಜಕಾರಣ ಬೆಳೆಸುತ್ತಿದ್ದಾರೆ ಎಂಬ ಮಾಜಿ ಸಚಿವ ಡಾ. ಕೆ. ಸುಧಾಕರ್ ಹೇಳಿಕೆ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ. 
ಡಾ.ಕೆ. ಸುಧಾಕರ್ , ಪ್ರದೀಪ್ ಈಶ್ವರ್
ಡಾ.ಕೆ. ಸುಧಾಕರ್ , ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹಾಲಿ ಶಾಸಕರು ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ರೌಡಿ ರಾಜಕಾರಣ ಬೆಳೆಸುತ್ತಿದ್ದಾರೆ ಎಂಬ ಮಾಜಿ ಸಚಿವ ಡಾ. ಕೆ. ಸುಧಾಕರ್ ಹೇಳಿಕೆ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ. 
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ನಮ್ಮ ಕಡೆಯವರು ದಾಳಿ ಮಾಡಿದ್ದಾರೆ ಅನ್ನೋದಾದ್ರೆ ತಾಕತ್ತಿದ್ದರೆ ಪ್ರೂಫ್ ತೋರಿಸಿ ಅಂತಾ ಕಿಡಿಕಾರಿದರು. 

ಕಳೆದ 15 ವರ್ಷಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರ ಶಾಂತಿಯುತವಾಗಿತ್ತು. ಕ್ಷೇತ್ರದ ಬಿಜೆಪಿ ಮುಖಂಡರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿ ದೌರ್ಜನ್ಯ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡರು ಕ್ಷೇತ್ರದಲ್ಲಿ ಗೂಂಡಾಗಿರಿ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಹಾಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಮಾಜಿ ಶಾಸಕ ಡಾ ಕೆ ಸುಧಾಕರ್ ನಿನ್ನೆ ವಾಗ್ದಾಳಿ ನಡೆಸಿದ್ದರು.

ಪಕ್ಷೇತರರಾಗಿ ಸ್ಪರ್ಧೆ ಮಾಡೋಣ ಎಂಬ ಸುಧಾಕರ್ ಸವಾಲ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, ಎರಡು ತಿಂಗಳ ಹಿಂದೆಯೇ ಅವರನ್ನು ಸೋಲಿಸಿ ಮನೆಗೆ ಕಳಿಸಿದ್ದೇನೆ. ಈಗ ಪಕ್ಷೇತರರಾಗಿ ಸ್ಪರ್ಧಿಸಬೇಕಂತೆ. ಯಾಕೆ ಬಿಜೆಪಿಯಲ್ಲಿ ಟಿಕೆಟ್ ಕೊಡಲ್ವಾ? ನೀವು ಬೇರೆ ಕ್ಷೇತ್ರ ಹುಡುಕಿಕೊಳ್ಳುವುದು ಒಳ್ಳೆಯದು. ಇಲ್ಲವಾದಲ್ಲಿ ಇಲ್ಲಿ ನಿಮಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ತಿರುಗೇಟು ನೀಡಿದರು.

ಬಿಜೆಪಿಯಲ್ಲಿ ಈಗಾಗಲೇ ಸುಧಾಕರ್ ಅವರನ್ನು ಕಡೆಗಣಿಸಿದ್ದಾರೆ. ಅವರೇ ಬಿಜೆಪಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಸುಧಾಕರ್ ಅವರಿಗೆ ಬಿಜೆಪಿ ಟಿಕೆಟ್ ಕೊಡುವುದೇ ಅನುಮಾನ. ಹೀಗಿರುವಾಗ ಕೋವಿಡ್ ಹಗರಣದಿಂದ ಬಚಾವ್ ಆಗಲು ಕಾಂಗ್ರೆಸ್ ಸೇರಲು ಪ್ರಯತ್ನಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಮುಖಂಡರೊಬ್ಬರ ಮೂಲಕ ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರೊಬ್ಬರು ಬಿಟ್ಟರೆ ಕಾಂಗ್ರೆಸ್ ನಲ್ಲಿ ಯಾರು ಅವರನ್ನು ಹತ್ತಿರ ಬಿಟ್ಟಿಕೊಳ್ಳಲ್ಲ. ಹಾಗಾಗೀ ಬೇರೆ ಕ್ಷೇತ್ರ ಹುಡುಕಿಕೊಳ್ಳುವುದು ಒಳ್ಳೆಯದು. ಪೆರೇಸಂದ್ರದಿಂದ ಇಬ್ಬರು ಶಾಸಕರಾಗಿ ಆಯ್ಕೆಯಾಗಬಹುದು ಎಂದರು.

ಸುಧಾಕರ್‌ಗೆ ನಾಚಿಕೆ ಮಾನ ಮರ್ಯಾದೆ ಏನು ಇಲ್ಲ ಎಂದು ಹರಿಹಾಯ್ದ ಪ್ರದೀಪ್ ಈಶ್ವರ್, ಅವರನ್ನ ನಂಬಿಕೊಂಡ್ರೆ ಬಿಜೆಪಿ ಕಾರ್ಯಕರ್ತರಿಗೆ ಚಿಪ್ಪೆ ಗತಿ. ನೀವು ನೋಡದೇ ಇರೋ ಸುಧಾಕರ್‌ನ ನಾನು ನೋಡಿದ್ದೀನಿ. ಸುಧಾಕರ್ ಬೆಂಬಲಿಗರು ಕಾನೂನು ಕೈಗೆ ಎತ್ತಿಕೊಂಡರೆ ಪಾಠ ಕಲಿಸೋದು ಗೊತ್ತು. ಬಾಲ ಬಿಚ್ಚಿದ್ರೇ ಕಟ್ ಮಾಡೋದು ಗೊತ್ತು ಅಂತಾ ಎಚ್ಚರಿಕೆಯನ್ನೂ ಕೊಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com