
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಜಿಹಾದಿ ಶಕ್ತಿಗಳು ತಲೆ ಎತ್ತುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸೋಮವಾರ ಆರೋಪಿಸಿದ್ದಾರೆ.
ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿನಿಯ ವಿಡಿಯೋ ಮಾಡಿದ ಘಟನೆ ಖಂಡಿಸಿ ಹಾಗೂ ಸಮಗ್ರ ತನಿಖೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕಟೀಲ್, ಸಿದ್ದರಾಮಯ್ಯ ಸಿಎಂ ಆದಮೇಲೆ ಹಿಂದೂ ವಿರೋಧಿ ನೀತಿ ಹೆಚ್ಚಿದೆ ಎಂದರು.
'ಸಿದ್ದರಾಮಯ್ಯ ಸರ್ಕಾರ ಪಿಎಫ್‌ಐ ಸಂಘಟನೆಗೆ ಸೇರಿದ ಉಗ್ರರನ್ನು ಬಿಡುಗಡೆ ಮಾಡುತ್ತಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ದೇಶ ವಿರೋಧಿ ಹಾಗೂ ಭಯೋತ್ಪಾದಕರ ಪರ ಸಿಎಂ ಆಗಿ ಬದಲಾಗಿದ್ದಾರೆ. ರಾಜ್ಯದಲ್ಲಿ ಅರಾಜಕತೆ ಇದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಸಿಎಂ ಮಾತ್ರವಲ್ಲ ಗೃಹ ಸಚಿವರೂ ವಿಫಲರಾಗಿದ್ದಾರೆ. ಗೃಹ ಸಚಿವರು ಇದನ್ನು ಮಕ್ಕಳ ಆಟ ಎಂದು ಬಿಂಬಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ವಿಡಿಯೋ ತೆಗೆದವರನ್ನು ಜೈಲಿಗೆ ಕಳುಹಿಸುವ ಧೈರ್ಯ ಸಿದ್ದರಾಮಯ್ಯ ಸರ್ಕಾರಕ್ಕೆ ಇಲ್ಲ ಎಂದ ಕಟೀಲ್, ನಮ್ಮ ಕಾರ್ಯಕರ್ತೆಯನ್ನ ಟ್ವೀಟ್ ಮಾಡಿದ ಕಾರಣಕ್ಕೆ ಜೈಲಿಗೆ ಹಾಕುತ್ತಾರೆ. ಆದರೆ ಜಿಹಾದಿಗಳನ್ನ, ವಿಡಿಯೋ ಮಾಡಿದವರನ್ನ ಹಾಗೂ ಹತ್ಯೆ ಮಾಡಿದವರನ್ನ ಜೈಲಿಗೆ ಹಾಕುವ ತಾಕತ್ತು ಸಿದ್ದರಾಮಯ್ಯಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಿಡಿಸಿದರು.
‘ಕಾಂಗ್ರೆಸ್ ಗೆದ್ದ ನಂತರ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ದೇಶವಿರೋಧಿಗಳನ್ನು ಬಂಧಿಸಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಅವರನ್ನು ಬಂಧಿಸಬೇಕು ಎಂದು ಕಟೀಲ್ ಸವಾಲು ಹಾಕಿದರು.
Advertisement