ಎಲ್ಲರಿಗೂ ಬೇಕು ಜಿಲ್ಲಾ 'ಉಸ್ತುವಾರಿ'; ಸಿದ್ದರಾಮಯ್ಯಗೆ ಬೆಂಗಳೂರು- ಮಂಗಳೂರಿನದ್ದೇ 'ವರಿ'! ಯಾರಿಗೆ ಸಿಗಲಿದೆ ಜವಾಬ್ದಾರಿ?

ಅಳೆದು ತೂಗಿ ಸಚಿವ ಸಂಪುಟ ರಚನೆ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಮಹತ್ವದ ಜವಾಬ್ದಾರಿ ಎದುರಿಗಿದೆ, ಶೀಘ್ರದಲ್ಲೆ ಕಾಂಗ್ರೆಸ್ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನೇಮಿಸುವ ಸಾಧ್ಯತೆಯಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಅಳೆದು ತೂಗಿ ಸಚಿವ ಸಂಪುಟ ರಚನೆ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಮಹತ್ವದ ಜವಾಬ್ದಾರಿ ಎದುರಿಗಿದೆ, ಶೀಘ್ರದಲ್ಲೆ ಕಾಂಗ್ರೆಸ್ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನೇಮಿಸುವ ಸಾಧ್ಯತೆಯಿದೆ.

ಕರಾವಳಿ ಭಾಗದಲ್ಲಿ ಪ್ರವಾಹ ಮತ್ತು ಧರ್ಮಕ್ಕೆ ಸಂಬಂಧಿಸಿದ ಇತರ ಸೂಕ್ಷ್ಮ ಸಮಸ್ಯೆಗಳು ಹಾಗೂ ನೈತಿಕ ಪೊಲೀಸ್‌ಗಿರಿಯಂತಹ ಸಂದರ್ಭಗಳನ್ನು ನಿಭಾಯಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಆದಷ್ಟು ಬೇಗ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸುವ ಸಾಧ್ಯತೆಯಿದೆ. ಮಂಗಳೂರಿಗೆ ಪ್ರಾತಿನಿಧ್ಯ ನೀಡಲು ಸಚಿವರಿಲ್ಲದ ಕಾರಣ ಬೆಂಗಳೂರಿನ ಏಳು ಸಚಿವರಲ್ಲಿ ಯಾರಿಗಾದರೂ ಅದರಲ್ಲೂ ಕೆಜೆ ಜಾರ್ಜ್‌ಗೆ ಜಿಲ್ಲಾ ಉಸ್ತುವಾರಿ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಆದಾಗ್ಯೂ ಮೂವತ್ನಾಲ್ಕು ಮಂದಿಯಲ್ಲಿ ಸಿದ್ದರಾಮಯ್ಯನವರ ಸಂಪುಟ ಸಹೋದ್ಯೋಗಿಗಳಲ್ಲಿ ಹೆಚ್ಚಿನವರು ತಮ್ಮದೇ  ಆದ ಜಿಲ್ಲೆಗಳ ಬಗ್ಗೆ ಒಲವು ಹೊಂದಿರುವುದರಿಂದ ಉಸ್ತುವಾರಿ ನೇಮಕಾತಿಯಲ್ಲಿ ಭಿನ್ನಾಭಿಪ್ರಾಯಗಳು ಉದ್ಭವಿಸುವುದು ಖಚಿತ.

ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿಯನ್ನು ಮುಖ್ಯಮಂತ್ರಿಗಳು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೋ ಅಥವಾ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವುದರಿಂದ ಅವರಿಗೆ ನೀಡುತ್ತಾರೋ ಎಂಬುದು ಕುತೂಹಲ ಮೂಡಿಸಿದೆ.

ಒಂದು ವೇಳೆ ಡಿ.ಕೆ ಶಿವಕುಮಾರ್  ತವರು ಜಿಲ್ಲೆ ಮತ್ತು ಅವರು ಪ್ರತಿನಿಧಿಸುವ ಕನಕಪುರ ವಿಧಾನಸಭಾ ಕ್ಷೇತ್ರವು ಅದರ ವ್ಯಾಪ್ತಿಗೆ ಒಳಪಡುವ ಕಾರಣ ರಾಮನಗರ ಜಿಲ್ಲೆಯ ಉಸ್ತುವಾರಿ ವಹಿಸುವಂತೆ ಕೇಳಬಹುದು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಂತಹ ದಿಗ್ಗಜರು ಸಚಿವ ಸ್ಥಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ಸ್ಪರ್ಧೆಗಿಳಿಯಬಹುದು ಎಂದು ಮೂಲಗಳು ತಿಳಿಸಿವೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ ಝಡ್ ಜಮೀರ್ ಅಹಮದ್ ಖಾನ್ ಸಹ ಹಿರಿಯರಾದರೂ ಅವರು ಹಕ್ಕು ಸಾಧಿಸುವ ಸಾಧ್ಯತೆಯಿಲ್ಲ ಆದರೆ ತಮ್ಮ ಖಾತೆಗಳ ಮೇಲೆ ಮಾತ್ರ ತಮ್ಮ ಗಮನ ಕೇಂದ್ರೀಕರಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ಬೈರತಿ ಸುರೇಶ್, ನಗರಾಭಿವೃದ್ಧಿ ಮತ್ತು ನಗರ ಯೋಜನೆ (ಕೆಯುಡಬ್ಲ್ಯುಎಸ್‌ಡಿಬಿ ಮತ್ತು ಕೆಯುಐಡಿಎಫ್‌ಸಿ ಸೇರಿದಂತೆ) ಬೆಂಗಳೂರು ನಗರ ಅಭಿವೃದ್ಧಿ ಹೊರತುಪಡಿಸಿ, ಜಿಲ್ಲಾ ಉಸ್ತುವಾರಿ ಪಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಬೆಳಗಾವಿ ಉಸ್ತುವಾರಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹುಬ್ಬಳ್ಳಿ ಧಾರವಾಡ ಜಿಲ್ಲೆ ಉಸ್ತುವಾರಿ  ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಆದರೆ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಕಾರ್ಮಿಕ ಸಚಿವ, ಕಲಘಟಗಿ ಶಾಸಕ ಸಂತೋಷ್ ಎಲ್ ಲಾಡ್ ಹುಬ್ಬಳ್ಳಿ ಧಾರವಾಡ ಜಿಲ್ಲಾ ಉಸ್ತುವಾರಿಯನ್ನು ಬಿಟ್ಟುಕೊಡುವ ಸಾಧ್ಯತೆ ಕಡಿಮೆಯಿದ್ದು, ಬೀದರ್ ಜಿಲ್ಲಾ ಉಸ್ತುವಾರಿಗೆ ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮತ್ತು ಪೌರಾಡಳಿತ ಸಚಿವ ಹಜ್ ರಹೀಂ ಖಾನ್ ಹೋರಾಟ ನಡೆಸಲಿದ್ದಾರೆ.

ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಲು ಬಯಸಿದ್ದು, ಯಾರಿಗೆ ಒಲಿಯಲಿದೆ ಎಂಬುದು ಎಂಬುದು ಕುತೂಹಲಕಾರಿಯಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ತುಮಕೂರು ಜಿಲ್ಲಾ ಉಸ್ತುವಾರಿಯಾಗುವ ಸಾಧ್ಯತೆ ಇದೆ. ಆದರೆ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಕಾರಣ ಸಹಕಾರ ಸಚಿವ ಕೆ.ಎನ್.ರಾಜಣ್ಣ ಕೂಡ ಕಣಕ್ಕೆ ಇಳಿಯಲಿದ್ದಾರೆ.

ಮೈಸೂರಿನಲ್ಲಿ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ ವೆಂಕಟೇಶ್ ಮತ್ತು ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ ನಡುವೆ ಸ್ಪರ್ಧೆ ನಡೆಯುತ್ತಿದೆ.  ಬಳ್ಳಾರಿ ಜಿಲ್ಲೆಗಾಗಿ ಯುವಜನ ಸೇವೆ, ಕ್ರೀಡೆ ಮತ್ತು ಎಸ್ಟಿ ಅಭಿವೃದ್ಧಿ ಸಚಿವ ಬಿ ನಾಗೇಂದ್ರ ಮತ್ತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜ್ (ಬಳ್ಳಾರಿ) ನಡುವೆ ಪೈಪೋಟಿ ಏರ್ಪಟ್ಟಿದೆ.

ಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ ಸುಧಾಕರ್ ಅವರ ಬದಲಿಗೆ ಚಿತ್ರದುರ್ಗಕ್ಕೆ ನಾಗೇಂದ್ರ ಅವರನ್ನು ಪರಿಗಣಿಸಬಹುದು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ ಬಿ ಪಾಟೀಲ್ ಮತ್ತು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಸಚಿವ ಶಿವಾನಂದ ಪಾಟೀಲ್ ವಿಜಯಪುರ ಜಿಲ್ಲೆಯವರಾಗಿದ್ದು ಇಬ್ಬರ ಮದ್ಯೆ ಪೈಪೋಟಿ ನಡೆದಿದೆ.

ಸಂಭವನೀಯ ಜಿಲ್ಲಾ ಉಸ್ತುವಾರಿ ಸಚಿವರು

  • ಮೀನುಗಾರಿಕೆ ಮತ್ತು ಬಂದರು, ಒಳನಾಡು ಸಾರಿಗೆ ಸಚಿವ ಮಂಕಾಳ್ ವೈದ್ಯ(ಉತ್ತರ ಕನ್ನಡ),
  • ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ(ಶಿವಮೊಗ್ಗ),
  • ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್(ಚಿಕ್ಕಬಳ್ಳಾಪುರ),
  • ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ(ಕೋಲಾರ),
  • ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ (ಮಂಡ್ಯ),
  • ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ (ದಾವಣಗೆರೆ),
  • ಅಬಕಾರಿ ಸಚಿವ ತಿಮ್ಮಾಪುರ ರಾಮಪ್ಪ ಬಾಳಪ್ಪ (ಬಾಗಲಕೋಟೆ),
  • ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಕಾನೂನು, ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ (ಗದಗ),
  • ಸಣ್ಣ ಕೈಗಾರಿಕೆಗಳು, ಸಾರ್ವಜನಿಕ ಉದ್ದಿಮೆಗಳು ಶರಣಬಸಪ್ಪ ದರ್ಶನಾಪುರ(ಯಾದಗಿರಿ),
  •  ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ. ಸಚಿವ ತಂಗಡಗಿ ಶಿವರಾಜ್ ಸಂಗಪ್ಪ(ಕೊಪ್ಪಳ),

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com