ಇದು ನನ್ನ ಕೊನೆ ಚುನಾವಣೆ, ಉಸಿರು ಇರುವವರೆಗೂ ಸಕ್ರಿಯ ರಾಜಕಾರಣದಲ್ಲಿರುತ್ತೇನೆ: ಸಿಎಂ ಸಿದ್ದರಾಮಯ್ಯ

ಇದು ನನ್ನ ಕೊನೆಯ ಚುನಾವಣೆ. ಆದರೆ ನನ್ನ ಉಸಿರು ಇರುವವರೆಗೂ ಸಕ್ರಿಯ ರಾಜಕಾರಣದಲ್ಲಿದ್ದು, ಜನರ ಸೇವೆಯನ್ನು ಮುಂದುವರೆಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಮೈಸೂರು: ಇದು ನನ್ನ ಕೊನೆಯ ಚುನಾವಣೆ. ಆದರೆ ನನ್ನ ಉಸಿರು ಇರುವವರೆಗೂ ಸಕ್ರಿಯ ರಾಜಕಾರಣದಲ್ಲಿದ್ದು, ಜನರ ಸೇವೆಯನ್ನು ಮುಂದುವರೆಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.

2013 ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ನುಡಿದಂತೆ ನಡೆದು ಸಮಾಜದ ಎಲ್ಲಾ ಜಾತಿ, ಧರ್ಮ ಮತ್ತು ಎಲ್ಲಾ ವರ್ಗಗಳ ಪರವಾಗಿ ಕಲ್ಯಾಣ ಕಾರ್ಯಕ್ರಮ ರೂಪಿಸಿದ್ದೆ. ಈ ಬಾರಿ ಇನ್ನಷ್ಟು ಪರಿಣಾಮಕಾರಿಯಾದ ಕಲ್ಯಾಣ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ನಾಡಿಗೆ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇಂದು ವರುಣಾ ವಿಧಾನಸಭಾ ಕ್ಷೇತ್ರದ ಸುತ್ತೂರಿನಲ್ಲಿ ನಡೆದ ಕೃತಜ್ಞತಾ ಸಮರ್ಪಣಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ಬಸವಾದಿ ಶರಣರು ನುಡಿದಂತೆ ನಡೆದಿದ್ದರು. ಅದನ್ನೇ ಮಾದರಿಯನ್ನಾಗಿ ಇಟ್ಟುಕೊಂಡು, ನಾನು ಮೊದಲ ಬಾರಿ ಬಸವ ಜಯಂತಿ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ನುಡಿದಂತೆ ನಡೆದಿದ್ದೆ ಎಂದರು.
 
ಮುಖ್ಯಮಂತ್ರಿ ಕುರ್ಚಿ ಎಂದರೆ ಸುಖದ ಸುಪ್ಪತ್ತಿಗೆ ಅಲ್ಲ, ಜನರ ಬದುಕನ್ನು ಸುಧಾರಿಸಲು ಸಿಗುವ ಅವಕಾಶ ಎಂಬುದು ನನ್ನ ಭಾವನೆ. ಆದರೆ ಭ್ರಷ್ಟಚಾರ, ದುರಾಡಳಿತ, ಅಭಿವೃದ್ಧಿಹೀನ ಮತ್ತು ಸಮಾಜವನ್ನು ಒಡೆಯುವ ದುಷ್ಟ ರಾಜಕಾರಣವನ್ನು ರಾಜ್ಯದ ಜನತೆ ಸೋಲಿಸಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಕಾರಣಕ್ಕಾಗಿ ನಾಡಿನ ಜನತೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಗ್ಯಾರಂಟಿಗಳು ಜಾರಿ ಆಗುವುದಿಲ್ಲ, ರಾಜ್ಯ ದಿವಾಳಿ ಆಗುತ್ತದೆ ಎಂದಿದ್ದರು. ಆದರೆ ನಾವು ಈಗ ಐದನ್ನೂ ಜಾರಿ ಮಾಡಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷ ಬಡವರ-ಮಧ್ಯಮ ವರ್ಗದವರ ಪರವಾದ ಯೋಜನೆ ಘೋಷಿಸಿದಾಗ ಪ್ರಧಾನಿ ಮೋದಿಯವರು ಜನರಿಗೆ ಅನುಕೂಲ ಮಾಡುವ ನಮ್ಮ ಯೋಜನೆಗೆ ತಮ್ಮ ಸಹಕಾರ ನೀಡಬೇಕಿತ್ತು. ಆದರೆ ಮೋದಿ ಅವರಿಗೆ ಬಡವರ-ಮಧ್ಯಮ ವರ್ಗದವರ ಪ್ರಗತಿ, ಅಭಿವೃದ್ಧಿ ಬೇಕಾಗಿಲ್ಲ. ಅದಕ್ಕೇ ಬಿಜೆಪಿಯವರು ಜನರಲ್ಲಿ ತಮ್ಮ ಸಂಪ್ರದಾಯದಂತೆ ಸುಳ್ಳುಗಳನ್ನು ಎರಚಾಡುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಜಿಎಸ್ ಟಿ ಪಾಲು ಸೇರಿದಂತೆ ಕೇಂದ್ರದಿಂದ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಎಲ್ಲಾ ಹಣವನ್ನು ನಾವು ಒತ್ತಾಯಪೂರ್ವಕವಾಗಿ ಕೇಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com