ಕಮಿಷನ್ ಹೊಡೆಯುವ ಪೇಟೆಂಟ್ ಬಿಜೆಪಿಯದ್ದು: 'ವಿಜಯೇಂದ್ರ ಟ್ಯಾಕ್ಸ್ ಸರ್ವೀಸ್' ಬಗ್ಗೆ ಯತ್ನಾಳ್ ಬಳಿ ಕೇಳಿ!
ಬೆಂಗಳೂರು: ಕಮೀಷನ್ ಹೊಡೆಯುವ ಉದ್ದೇಶದಿಂದ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿ ನಾಟಕ ಮಾಡುತ್ತಿದ್ದಾರೆ ಎಂಬ ಬಿಜೆಪಿ ಶಾಸಕ ಬಿ ವೈ ವಿಜಯೇಂದ್ರ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಕಮಿಷನ್ ಹೊಡೆಯುವ ಪೇಟೆಂಟ್ ಬಿಜೆಪಿಯದ್ದು ಹೊರತು ಕಾಂಗ್ರೆಸ್‌ನದ್ದಲ್ಲ, ನಿಮ್ಮ ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್ ಹೇಗಿತ್ತು ಅನ್ನೋದನ್ನ ಯತ್ನಾಳ್ ಅವರೇ ವಿವರಿಸುತ್ತಾರೆ, ಒಮ್ಮೆ ಕೇಳಿ ಎಂದು ಹೇಳಿದೆ.
ರಾಜ್ಯದ ಬಡವರ ಹೊಟ್ಟೆ ಮೇಲೆ ಹೊಡೆಯಲು ರಾಜ್ಯದಿಂದ ಹಿಡಿದು ಕೇಂದ್ರದವರೆಗೂ ಬಿಜೆಪಿಯ ಪ್ರತಿ ನಾಯಕರೂ ಟೊಂಕ ಕಟ್ಟಿ ನಿಂತಿದ್ದಾರೆ. ಜನ ಇವೆಲ್ಲವಕ್ಕೂ ಉತ್ತರಿಸುತ್ತಾರೆ ಎಂದು ಕಾಂಗ್ರೆಸ್ ತಪರಾಕಿ ಹಾಕಿದೆ.
ಪ್ರವೀಣ್ ನೆಟ್ಟಾರು ಪತ್ನಿಗೆ ಉದ್ಯೋಗದಲ್ಲಿ ಮುಂದುವರೆಯಲು ಅವಕಾಶ. ಫಾಜಿಲ್, ಮಸೂದ್, ಅಜರ್ ಹಾಗೂ ದೀಪಕ್ ರಾವ್ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ. ಬಿಜೆಪಿ ಹಚ್ಚಿದ ದ್ವೇಷದ ಕಿಚ್ಚಿಗೆ ಬಲಿಯಾದ ಅಮಾಯಕರ ಕುಟುಂಬಗಳಿಗೆ ನ್ಯಾಯವನ್ನು ಸರಿದೂಗಿಸಿದ್ದೇವೆ. ನಮ್ಮ ಸರ್ಕಾರ ಯಾವುದೇ ಬಗೆಯಲ್ಲಿ ಕಾನೂನು ಮೀರುವುದನ್ನು ಸಹಿಸುವುದಿಲ್ಲ, ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡುವುದೇ ನಮ್ಮ ಗುರಿ ಎಂದು ಕಾಂಗ್ರೆಸ್ ಹೇಳಿದೆ.
ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವದೊಂದಿಗೆ ಮುನ್ನೆಡೆಯುವ ನಮ್ಮ ಸರ್ಕಾರದಲ್ಲಿ ತಾರತಮ್ಯಕ್ಕೆ ಆಸ್ಪದವಿಲ್ಲ. ಬಿಜೆಪಿ ಅವಧಿಯಲ್ಲಿ ಕೋಮು ಕಿಚ್ಚಿಗೆ ಬಲಿಯಾದ ಮಸೂದ್, ಫಾಜಿಲ್, ಜಲೀಲ್ ಹಾಗೂ ದೀಪಕ್ ರಾವ್ ಅವರ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂ. ಗಳನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕರ್ನಾಟಕದಲ್ಲಿ ಇನ್ಮುಂದೆ ಕೋಮು ಕಲಹಕ್ಕೆ, ಪ್ರಚೋದನೆಗೆ ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ ಎಂದು ಟ್ವೀಟ್ ನಲ್ಲಿ ಹೇಳಿದೆ.
ಕಾಂಗ್ರೆಸ್ ಸರ್ಕಾರ ಕಮಿಷನ್ ಹೊಡೆಯುವ ಉದ್ದೇಶದಿಂದಲೇ ನೆರೆಯ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡುವ ನಾಟಕ ಆಡುತ್ತಿದೆ. ನಮ್ಮ ರಾಜ್ಯದ ರೈತರಿಂದಲೇ ಅಕ್ಕಿಯನ್ನು ಏಕೆ ಖರೀದಿಸಬಾರದು’ ಎಂದು ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ