ಹಿಂದೂ-ಮುಸ್ಲಿಂ ಡಿಎನ್‌ಎ ಒಂದೇ, 'ವಸುದೈವ ಕುಟುಂಬಕಂ' ಬಿಜೆಪಿ ಮಂತ್ರವಾಗಬೇಕು: ಭಾಸ್ಕರ್ ರಾವ್

ಬಿಜೆಪಿಯಲ್ಲಿ ಮುಸ್ಲಿಮರಿಗೆ ಅವಕಾಶ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದ ರಾವ್, ಪುರಾತನ ಸಂಸ್ಕೃತ ವಾಕ್ಯವಾದ 'ವಸುದೈವ ಕುಟುಂಬಕಂ' (ಜಗತ್ತೇ ಒಂದು ಕುಟುಂಬ) ಅನ್ನು ಉಲ್ಲೇಖಿಸಿ ಎರಡೂ ಸಮುದಾಯಗಳ ಡಿಎನ್‌ಎ ಒಂದೇ ಎಂದು ಹೇಳಿದರು.
ಭಾಸ್ಕರ್ ರಾವ್
ಭಾಸ್ಕರ್ ರಾವ್

ಬೆಂಗಳೂರು: 2024 ರ ಲೋಕಸಭಾ ಚುನಾವಣೆಯು ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹಲವು ಸಭೆಗಳನ್ನು ನಡೆಸುತ್ತಿದೆ. ಇತ್ತೀಚೆಗೆ ನಡೆದ ಬಿಜೆಪಿ ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಭಾಗವಹಿಸಿದ್ದರು. ಈ ವೇಳೆ ಮಾಜಿ ಪೊಲೀಸ್ ಅಧಿಕಾರಿ ಮತ್ತು ಬಿಜೆಪಿ ನಾಯಕ ಭಾಸ್ಕರ್ ರಾವ್ ಅವರು ಪಕ್ಷವು ಮುಸ್ಲಿಮರನ್ನು ಜೊತೆಗೆ ಕರೆದೊಯ್ಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಪೊಲೀಸ್ ಕಮಿಷನರ್ ಅವರ ಅಭಿಪ್ರಾಯವು ಬಿಜೆಪಿ ಅಳವಡಿಸಿಕೊಂಡಿರುವ ಧ್ರುವೀಕರಣದ ಕಾರ್ಯಸೂಚಿಗೆ ತೀವ್ರ ವ್ಯತಿರಿಕ್ತವಾಗಿದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಹೆಚ್ಚಿನ ಬಿಜೆಪಿ ನಾಯಕರು ಅನುದಾನದಂತಹ ಸಣ್ಣ ಪುಟ್ಟ ವಿಷಯಗಳು, ವರ್ಗಾವಣೆ ಕೋರಿಕೆಗಳ ಅನುಸರಣೆ ಬಗ್ಗೆ ಮಾತ್ರ ಸಭೆಯಲ್ಲಿ ಮಾತನಾಡಿದ್ದಾರೆ.

ಆದರೆ ಭಾಸ್ಕರ್ ರಾವ್ ಅವರು ನಿಲುವು ವಿಭಿನ್ನವಾಗಿದೆ. ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಕೀರ್ತಿಗೆ ಪಾತ್ರರಾಗಿರುವ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕೆಲವು ಸಲಹೆಗಳನ್ನು ಭಾಸ್ಕರ್ ರಾವ್ ಉಲ್ಲೇಖಿಸಿದರು.

ಬಿಜೆಪಿಯಲ್ಲಿ ಮುಸ್ಲಿಮರಿಗೆ ಅವಕಾಶ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದ ರಾವ್, ಪುರಾತನ ಸಂಸ್ಕೃತ ವಾಕ್ಯವಾದ 'ವಸುದೈವ ಕುಟುಂಬಕಂ' (ಜಗತ್ತೇ ಒಂದು ಕುಟುಂಬ) ಅನ್ನು ಉಲ್ಲೇಖಿಸಿ ಎರಡೂ ಸಮುದಾಯಗಳ ಡಿಎನ್‌ಎ ಒಂದೇ ಎಂದು ಹೇಳಿದರು.

ಚುನಾವಣಾ ಸೋಲಿನ ಆತ್ಮಾವಲೋಕನ ಮತ್ತು ಸಾರ್ವತ್ರಿಕ ಚುನಾವಣೆಗೆ ಸಲಹೆಗಳನ್ನು ನೀಡಲು ಪಕ್ಷವು ನಡೆಸಿದ ಸಭೆಯಲ್ಲಿ ಅವರ ಹೇಳಿಕೆ ಹೊರಬಿದ್ದಿದೆ. ಸರ್ವಜ್ಞನಗರ, ಪುಲಕೇಶಿನಗರ, ಶಿವಾಜಿನಗರ, ಬಿಟಿಎಂ ಲೇಔಟ್, ಶಾಂತಿನಗರ ಮತ್ತು ಗಾಂಧಿನಗರದಂತಹ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಗಳನ್ನು ಕಿತ್ತೊಗೆಯಲು ವಿಶೇಷ ಕಾರ್ಯನಿರ್ವಹಣೆಯೊಂದಿಗೆ ಪಕ್ಷಕ್ಕೆ ವಿಶೇಷ ಪ್ರಧಾನ ಕಾರ್ಯದರ್ಶಿ ಮಟ್ಟದ ಪದಾಧಿಕಾರಿ ಇರಬೇಕು ಎಂದು ರಾವ್ ಸಲಹೆ ನೀಡಿದರು. ಈ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯರ್ತರು ಇದ್ದರೂ, ಪಕ್ಷದ ಮತಗಳಿಕೆಯನ್ನು ಹೆಚ್ಚಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ ಎಂದರು.

ಸಿಎಎ-ಎನ್‌ಆರ್‌ಸಿ ಪ್ರತಿಭಟನೆಗಳು ನಡೆಯುತ್ತಿರುವಾಗ, ಯಾರಿಗೂ ನೋವಾಗದಂತೆ ನೋಡಿಕೊಳ್ಳಲು ಸಿಎಂ ಯಡಿಯೂರಪ್ಪ ಅವರಿಗೆ (ರಾವ್) ಅಂದು ಸೂಚನೆ ನೀಡಿದ್ದರು ಎಂದು ರಾವ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಬಿಜೆಪಿಯಲ್ಲಿ ಇದು ಹೊಸ ಪರಿಭಾಷೆಯಾಗಿ ಕಂಡುಬರುತ್ತದೆ ಏಕೆಂದರೆ , ಟೀಕಾಕಾರರು ಯಾವಾಗಲೂ ಪಕ್ಷವು "ಕೋಮುವಾದ ಮತ್ತು ದ್ವೇಷದ ಅಜೆಂಡಾವನ್ನು" ಅನುಸರಿಸುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಕೇಸರಿ ಪಾಳಯದಲ್ಲಿ ಭಾಸ್ಕರ್ ರಾವ್ ಮತ್ತು ಯಡಿಯೂರಪ್ಪ ಒಂದು ತುದಿಯಲ್ಲಿದ್ದರೆ, ಬಹಿಷ್ಕಾರಗಳು ಮತ್ತು ನಿಷೇಧ ಮತ್ತು ಗುಂಪು ಹತ್ಯೆ ಬಗ್ಗೆ ಕಟು ಟೀಕೆ ಮಾಡುವವರು ಇನ್ನೊಂದು ತುದಿಯಲ್ಲಿದ್ದಾರೆ. ಲೋಕಸಭೆ ಚುನಾವಣೆ ಸಿದ್ಧತೆ ಮಾಡುತ್ತಿರುವ ಬಿಜೆಪಿ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಅಜೆಂಡಾ ಒಳಗೊಂಡಿದೆ.

ಇತ್ತೀಚೆಗಷ್ಟೇ ಎಎಪಿಯಿಂದ ಬಿಜೆಪಿಗೆ ಸೇರಿರುವ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ಪಕ್ಷ ನಿರ್ಧರಿಸುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com