
ಬೆಂಗಳೂರು: ಮಾಜಿ ಸಚಿವ, ಬೆಂಗಳೂರಿನ ಗೋವಿಂದ ರಾಜನಗರ ಕ್ಷೇತ್ರದ ಶಾಸಕ ವಿ ಸೋಮಣ್ಣ ಅವರು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ವರುಣಾ ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಎರಡೂ ಕಡೆ ಸೋತಿದ್ದಾರೆ.
ಸೋಲಿನ ಕಹಿ ಅವರನ್ನು ಆಗಾಗ ಕಾಡುತ್ತಲೇ ಇರುತ್ತದೆ.ಸೋಲಿನ ಬಳಿಕ ಇಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿಯ ಕಾನೂನು ಪ್ರಕೋಷ್ಠ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸೋಲಿನ ಬಳಿಕ ಮೊದಲ ಬಾರಿ ಕಚೇರಿಗೆ ಬಂದಿದ್ದೇನೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ನಂಬಿದವನು ನಾನು. ಗೋವಿಂದರಾಜನಗರದಲ್ಲಿ 480 ಕೋಟಿ ರೂಪಾಯಿಗೂ ಹೆಚ್ಚಿನ ಕೆಲಸ ಮಾಡಿರುವೆ. ಆಸ್ಪತ್ರೆ, ಶಾಲೆ, ಕಾಲೇಜು ಸೇರಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾನು ಮನೆಯಲ್ಲಿ ಆರಾಮಾಗಿ ಮಲಗಿದ್ದರೂ ಗೆಲ್ಲುತ್ತಿದೆ. ಆದರೆ ಪಕ್ಷ ನೀಡಿದ ಟಾಸ್ಕ್ ಪೂರೈಸಲು ಕ್ಷೇತ್ರ ಬಿಟ್ಟು ಹೋದೆ. ವರುಣಾ ಹಾಗೂ ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತು ಈಗ ನಿರುದ್ಯೋಗಿಯಾಗಿ ಮನೆಯಲ್ಲಿ ಕುಳಿತಿದ್ದೇನೆ ಎಂದರು.
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೇನೆ: ನಾನು ಹೈಕಮಾಂಡ್ ಬಳಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ನನಗೆ ಇತಿಮಿತಿ ಇದೆ. ಫೋರ್ ಸಿಕ್ಸ್ ಎಲ್ಲ ಇಲ್ಲೆ ಹೊಡೆಯುತ್ತೇನೆ ಅಂತ ಹೇಳಿದ್ದೇನೆ. ಈಗ ಬೋಲ್ಡ್ ಕೂಡ ಆಗಿದ್ದೇನೆ. ಪಕ್ಷ ಕೊಡುವ ಸಂದೇಶದ ಪ್ರಕಾರ ಕೆಲಸ ಮಾಡುತ್ತೇನೆ. ಡಬಲ್ ಸ್ಟ್ಯಾಂಡರ್ಡ್ ನನಗೆ ಇಲ್ಲ. ಎಲ್ಲ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಬಿಜೆಪಿಗೆ ಬಂದು ಎಂತೆಂತಹ ಸಂದರ್ಭದಲ್ಲೂ ಕೆಲಸ ಮಾಡಿದ್ದೇನೆ. ನಾನು ಸನ್ಯಾಸಿ ಅಲ್ಲ, ನನಗೂ ಆಸೆ-ಆಕಾಂಕ್ಷೆಗಳಿವೆ. ಈಗಲೂ ಅವಕಾಶ ಕೊಟ್ಟರೆ ಮಾಡುತ್ತೇನೆ ಎಂದು ಪರೋಕ್ಷವಾಗಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುವ ಇಂಗಿತ ವ್ಯಕ್ತಪಡಿಸಿದರು.
Advertisement