ಎಲ್ಲರೂ ಸೆಗಣಿ ತಿನ್ನೋರೆ ಇದ್ದಾರೆ ಎಂದ ನಿರಾಣಿ; ಹಿಂದೂ ಆಗಿ ಹಿಂದೂಗಳ ವಿರುದ್ಧ ನಿಲ್ಲುವವರೇ ಹಿಜಡಾಗಳು ಎಂದ ಯತ್ನಾಳ್!

ಬಾಗಲಕೋಟೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಪರಸ್ಪರ ಕೆಸರೆರೆಚಾಟ ಮುಂದುವರಿಸಿದ್ದಾರೆ.
ಯತ್ನಾಳ್ ಮತ್ತು ನಿರಾಣಿ
ಯತ್ನಾಳ್ ಮತ್ತು ನಿರಾಣಿ

ಬಾಗಲಕೋಟೆ: ಬಾಗಲಕೋಟೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಪರಸ್ಪರ ಕೆಸರೆರೆಚಾಟ ಮುಂದುವರಿಸಿದ್ದಾರೆ.

ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿಯಲ್ಲಿನ ದೇವರಂತಹ ಕಾರ್ಯಕರ್ತರು ಎಲ್ಲಿಯೂ ಸಿಗೋದಿಲ್ಲ, ನಾನು ಯಡಿಯೂರಪ್ಪ, ಅನಂತ ಕುಮಾರ್ ಜೊತೆ ಬೆಳೆದವನು, ನಾನು ನಾಲ್ಕನೇ ಲೀಡರ್. ಯಡಿಯೂರಪ್ಪ ನಮ್ಮನ್ನು ಮಂತ್ರಿ ಮಾಡಲಿಲ್ಲ. ಬೊಮ್ಮಾಯಿ ಮಾಡ್ತಿದ್ರು ಆದರೆ, ಅನುಮತಿ ಸಿಗಲಿಲ್ಲ.

ನಾವೇನು ಇಲ್ಲಿ ಗುಂಡಾಗಿರಿ ಮಾಡೋಕೆ ಬಂದಿಲ್ಲ, ಹಿಂದೂ ಆಗಿ ಹಿಂದೂಗಳ ವಿರುದ್ಧ ನಿಲ್ಲುವವರೇ ಹಿಜಡಾಗಳು, ನಮ್ಮ ಪಾರ್ಟಿಯಲ್ಲಿದ್ದು ನಮ್ಮವರನ್ನು ಸೋಲಿಸೋದು ಆಗಬಾರದು. ರಾಜ್ಯದಲ್ಲಿ ನಮ್ಮ ಕೆಲವು ನಾಯಕರು ಮಾಡಿದ್ದು ರಾಷ್ಟ್ರೀಯ ನಾಯಕರಿಗೆ ಗೊತ್ತಿದೆ. ಬಾಗಲಕೋಟೆ ರಾಜಕಾರಣ ಹದಗೆಟ್ಟ ಹೈದರಾಬಾದ್‌ ಆಗಿದೆ ಎಂದರು. ಗೌಡ್ರನ್ನ ಕೆಡವೇ ಕೆಡತಿವಿ. ಮುಗಿಸೇ ಬಿಡ್ತೀವಿ ಅಂದ್ರು.  ಎಲ್ಲ ಹಲ್ಕಟ್‌ಗಿರಿ ಮಾಡಿದರು. ಅವರು ಏನಾದ್ರೂ ನಿಮಗೆ ಗೊತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಬಸನಗೌಡ ಪಾಟೀಲ್‌ ಯತ್ನಾಳ್‌ ಭಾಷಣಕ್ಕೆ ವೇದಿಕೆಯಲ್ಲಿಯೇ ಯತ್ನಾಳ್‌ ಹೆಸರು ಹೇಳದೇ ತಿರುಗೇಟು ನೀಡಿದ ಮುರುಗೇಶ್‌ ನಿರಾಣಿ, ನಾವು ಸಹ ಕೃಷ್ಣಾ ನದಿ ನೀರು ಕುಡಿದೀವಿ. ಬಾಗಲಕೋಟೆ, ವಿಜಯಪುರ ಗಾಳಿ ಸೇವಿಸಿದ್ದೇವೆ. ಯಾರು ಏನು ಮಾತಾಡ್ತಾರಾ ಅದರ ಹತ್ತರಷ್ಟು ಶಬ್ದ ನಮ್ಮ ಬಾಯಲ್ಲಿ ಇವೆ ಎಂದರು.

ಚುನಾವಣೆಯಲ್ಲಿ ಜಿಲ್ಲೆಯಲ್ಲಿ ತಾವೊಬ್ಬರೇ ಗೆದ್ದಿರುವುದಾಗಿ ಯತ್ನಾಳಗೆ ಕೋಡು, ಸೊಕ್ಕು, ದಿಮಾಕು ಬಂದಿದೆ. 2018ರಲ್ಲಿ ನಾಗಠಾಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗೋವಿಂದ ಕಾರಜೋಳ ಮಗನನ್ನು ಸೋಲಿಸಿದವರು ಯಾರು? ಬಬಲೇಶ್ವರದಲ್ಲಿ ಮೂರು ಚುನಾವಣೆಯಲ್ಲಿ ವಿಜುಗೌಡರನ್ನು ಸೋಲಿಸಿದ್ದು ಯಾರು? ಎಂದು ಮುರುಗೇಶ್ ನಿರಾಣಿ ಯತ್ನಾಳ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

35 ವರ್ಷಗಳಿಂದ ಬಿಜೆಪಿಯಲ್ಲೇ ಇದ್ದೇನೆ. ಪಕ್ಷ ನನ್ನ ತಾಯಿ ಇಲ್ಲಿಯೇ ಇದ್ದೇನೆ. ಮುಂದೆಯೂ ಇರುತ್ತೇನೆ. ಮತ್ತೊಬ್ಬರ ತರಹ ನಾಟಕ ಆಡಿ ಈ ಕಡೆ ಆ ಕಡೆ ಹೋಗುವುದಿಲ್ಲ. ತಲೆ ಮೇಲೆ ಟೋಪಿಗೆ ಹಾಕಿಕೊಂಡು ನಮಾಜ್‌ ಮಾಡಿಲ್ಲ. ಬಾಳ ಕೆದಕಲಿಕ್ಕೆ ಹೋದರೆ ಎಲ್ಲರೂ ಸೆಗಣಿ ತಿನ್ನೋರ ಅದಾರ’ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ವಾಗ್ದಾಳಿ ನಡೆಸಿದರು.

ನಾಟಕ ಮಾಡ್ತೀರಿ. ಯಾರನ್ನೋ ಸೋಲಿಸಲು ಹೋಗಿ ಡುಮಕ್ ಅಂದ್ರಂತೆ. ನೀವು ವಿಧಾನಸಭೆ ಲೋಕಸಭೆ ಚುನಾವಣೆಯಲ್ಲಿ ಡುಮುಕ್ ಆಗಿದ್ರಲ್ಲ. ಅದನ್ನು ಮರೆತೀರಿ. ಯಾರು ಯಾರು ಒಳಗೆ ಒಪ್ಪಂದ ಮಾಡಿಕೊಂಡಿಲ್ಲ? ವಿಜಯಪುರದಲ್ಲಿ ಮಂತ್ರಿಗೆ ಚೇಲಾ ಆಗಿದ್ದೀರಿ. ಮತ್ತೊಬ್ಬರಿಗೆ ಬೆರಳು ಮಾಡಿ ತೋರಿಸ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com