ಸಾಲ ಮಾಡಿ ಎಷ್ಟು ದಿನ ತುಪ್ಪ ತಿನ್ನಬಹುದು? ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ಪಿಕ್‌ ಪಾಕೆಟ್‌ ಮಾಡುವವರಿಗಿಂತ ನಾಜೂಕಾಗಿ ಜನಸಾಮಾನ್ಯರ ಜೇಬು ಕತ್ತರಿಸುವ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡಿದ್ದು, ಈ ಮೂಲಕ ಬೆಲೆ ಏರಿಕೆ ಗ್ಯಾರಂಟಿ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಸಿ.ಟಿ ರವಿ
ಸಿ.ಟಿ ರವಿ
Updated on

ಬೆಂಗಳೂರು: ಪಿಕ್‌ ಪಾಕೆಟ್‌ ಮಾಡುವವರಿಗಿಂತ ನಾಜೂಕಾಗಿ ಜನಸಾಮಾನ್ಯರ ಜೇಬು ಕತ್ತರಿಸುವ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡಿದ್ದು, ಈ ಮೂಲಕ ಬೆಲೆ ಏರಿಕೆ ಗ್ಯಾರಂಟಿ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

‘ಮೇರಾ ಬೂತ್‌-ಸಬ್‌ ಸೇ ಮಜ್‌ ಬೂತ್‌’ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರ ಸದ್ದಿಲ್ಲದೆ ವಿದ್ಯುತ್‌ ದರ, ಅಬಕಾರಿ ಸುಂಕ ಏರಿಸಿದೆ. ಇದರ ಬೆನ್ನಿಗೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಈ ಮೂಲಕ ಬೆಲೆ ಏರಿಕೆ ಗ್ಯಾರಂಟಿ ನೀಡಿದೆ ಎಂದರು.

ಕಾಂಗ್ರೆಸ್‌ ಆಡಳಿತ ಇದ್ದಲ್ಲೆಲ್ಲ ಹಗರಣಗಳದ್ದೇ ಸದ್ದು. ಅವರೆಲ್ಲರೂ ಖಾಯಂ ಜೈಲಿನಲ್ಲಿ ಇರಬೇಕಾದ ಭಯದಿಂದ ಒಟ್ಟಾಗಲು ಯತ್ನಿಸುತ್ತಿದ್ದಾರೆ. ಭಾರತದ ಅಭಿವೃದ್ಧಿ, ಉದ್ಧರಿಸುವ ಅಜೆಂಡಾ ಅವರದ್ದಲ್ಲ. ಕುಟುಂಬ ಉಳಿಸಿಕೊಳ್ಳುವುದು, ಜೈಲಿಗೆ ಹೋಗುವುದನ್ನು ತಪ್ಪಿಸುವ ಉದ್ದೇಶ  ಇವರದ್ದು  ಎಂದು ಟೀಕಿಸಿದರು.

ಕೇಂದ್ರದ ಬಿಜೆಪಿ ಸರ್ಕಾರ ಜನರ ಬದುಕನ್ನು ಬದಲಾಯಿಸಲು ಸಹಾಯ ಮಾಡುತ್ತಿದೆ ಎಂಬುದನ್ನು ತಿಳಿಸಬೇಕು. ಅಬಕಾರಿ ಸುಂಕ ಹೆಚ್ಚಳ, ವಿದ್ಯುತ್‌ ದರ ಏರಿಕೆಯ ಪರಿಣಾಮವಾಗಿ ಆಹಾರವಸ್ತುಗಳ ದರ ಏರಿಕೆ ಆಗುತ್ತದೆ. ನಾವು ತುಲನೆ ಮಾಡಿ ನೋಡಬೇಕು. ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ ಎಷ್ಟಿದೆ? ಯಾಕೆ ಜಾಸ್ತಿ ಮಾಡಿದ್ದಾರೆ? ಎಂಬುದನ್ನು ತುಲನೆ ಮಾಡಿ ನೋಡಬೇಕು ಎಂದರು.

ವಿದ್ಯುತ್‌ ದರ ಏರಿಕೆ ಕುರಿತು ಕೈಗಾರಿಕೋದ್ಯಮಿಗಳು ಬೇಸರ-ಆತಂಕ ತೋಡಿಕೊಂಡಿದ್ದಾರೆ. ಕೈಗಾರಿಕೆ ಮುಚ್ಚಬೇಕಾದ ಸ್ಥಿತಿ ಬರಬಹುದೆಂದು ತಿಳಿಸಿದ್ದಾರೆ. ಇದರ ಹಿಂದೆ ದೊಡ್ಡ ಅಪಾಯ ಇದೆ. ಇದನ್ನು ಪರಿಹರಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಕೈಗಾರಿಕೆಗಳು ಮುಚ್ಚಿದರೆ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ. ತೆರಿಗೆ ಸಂಗ್ರಹ ಕುಸಿಯುತ್ತದೆ. ಹೀಗಾದಾಗ ಉಚಿತ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಸಿ.ಟಿ.ರವಿ, ಸಾಲ ಮಾಡಿ ಎಷ್ಟುದಿನ ತುಪ್ಪ ತಿನ್ನಬಹುದು ಅಥವಾ ತಿನ್ನಿಸಬಹುದು ಎಂದು ಕೇಳಿದ ಅವರು, ಕೆಲವು ದಿನ ಕಳೆದ ಬಳಿಕ ತುಪ್ಪವೂ ಇಲ್ಲ, ಕೈಗೆ ಚಿಪ್ಪು ಅಷ್ಟೇ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯರ ಅವಧಿಯಲ್ಲಿ ರೀಡೂ ಆಗಿತ್ತು. ರೀಡೂ ಮೂಲಕ ವಂಚನೆ ಮಾಡುವುದು ಹೇಗೆ ಎಂಬುದನ್ನು ಪರಿಚಯಿಸಿದ್ದೇ ಕಾಂಗ್ರೆಸ್‌ ಆಡಳಿತ. ಕಾಂಗ್ರೆಸ್ಸಿಗರು ಪ್ರಾಮಾಣಿಕರಿದ್ದರೆ ಮೊದಲು ಆ ಕುರಿತು ಕ್ರಮ ಕೈಗೊಳ್ಳಲಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಭೋಪಾಲ್‍ನಲ್ಲಿ ದೇಶದ ಎಲ್ಲ ಲೋಕಸಭಾ ಕ್ಷೇತ್ರದ ವಿಸ್ತಾರಕರ ಜೊತೆ ಹಾಗೂ ದೇಶದ 10 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರ ಜೊತೆಗೆ ವರ್ಚುವಲ್ ಮಾಧ್ಯಮದಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರು ಮಾತನಾಡಿದ್ದಾರೆ. ಕಾರ್ಯಕರ್ತರ ಪ್ರಶ್ನೆಗಳು, ಅನುಮಾನಗಳಿಗೆ ಉತ್ತರವನ್ನು ನೀಡಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ಯಾವುದೇ ಭಾಷಣ ಅಥವಾ ಕಾರ್ಯದಲ್ಲಿ ಪಾಲ್ಗೊಳ್ಳದಂತೆ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ. ಪಕ್ಷದ ಕೇಂದ್ರ ಸಂಸದೀಯ ಮಂಡಳಿಯು ವಿರೋಧ ಪಕ್ಷದ ನಾಯಕನ ಹುದ್ದೆ ಮತ್ತು ಇತರ ಹುದ್ದೆಗಳಿಗೆ ಸಂಬಂಧಿಸಿದಂತೆ ಸೂಕ್ತ ಸಮಯದಲ್ಲಿ ತನ್ನ ನಿರ್ಧಾರವನ್ನು ಪ್ರಕಟಿಸುತ್ತದೆ. ಪಕ್ಷದ ಕೆಲ ಮುಖಂಡರು ಮಾಧ್ಯಮಗಳ ಮುಂದೆ ನಾನಾ ಹುದ್ದೆಗಳ ಆಸೆ ವ್ಯಕ್ತಪಡಿಸುತ್ತಿರುವುದು ಗಮನಕ್ಕೆ ಬಂದಿದ್ದು, ಪಕ್ಷದ ಸಭೆಗಳಲ್ಲಿ ಚರ್ಚೆ ನಡೆಸುವುದು ಸರಿಯಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com