ಕೋಲಾರದಲ್ಲಿ ಸಿದ್ದರಾಮಯ್ಯನ್ನ ಕಾಂಗ್ರೆಸ್ನವರೇ ಸೋಲಿಸ್ತಾರೆ: ಈಶ್ವರಪ್ಪ
ಚಾಮರಾಜನಗರ: ಸಿದ್ದರಾಮಯ್ಯ ಅವರನ್ನು ಕೋಲಾರದಲ್ಲಿ ನಿಲ್ಲಲ್ಲು ಹೈಕಮಾಂಡ್ ಹೇಳಿತ್ತಾ? ಚುನಾವಣೆ ಸೋಲುವ ಭಯದಿಂದ ಕೋಲಾರಕ್ಕೆ ಹೋಗಿದ್ದಾರೆ. ಇದೀಗ ಇವರನ್ನ ಬಿಜೆಪಿಗಿಂತ ಕಾಂಗ್ರೆಸ್ ಪಾರ್ಟಿ ಒಳಗಿರುವವರೆ ಸೋಲಿಸುತ್ತಾರೆ ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಬಾಂಬ್ ಸಿಡಿಸಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಈಶ್ವರಪ್ಪ, ನಿಮಗೆ ಸಿಎಂ ಪ್ರತಿಸ್ಪರ್ಧಿ ಅಂತ ಪರಮೇಶ್ವರ್ ಸೋಲಿಸಿದ್ರಿ. ರಮೇಶ್ ಕುಮಾರ್ ಮೂಲಕ ಮುನಿಯಪ್ಪ ಸೋಲಿಸಿದ್ರಿ. ಒಂದು ಕಡೆ ಒಕ್ಕಲಿಗರು, ದಲಿತರು ಸಿದ್ದರಾಮಯ್ಯ ಸೋಲಿಸಲು ಕಾಯುತ್ತಿದ್ದಾರೆ. ಈ ಎರಡು ಸಮುದಾಯದವರು ಕೈ ಬಿಟ್ಟಿರುವುದಕ್ಕೆ ಮುಸ್ಲಿಂ ಓಲೈಕೆಗೆ ಮುಂದಾಗಿದ್ದಾರೆ ಎಂದರು.
ಇನ್ನು ಇದೇ ವೇಳೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಗೈರು ಆಗಿರುವುದಕ್ಕೆ ಪ್ರಕ್ರಿಯಿಸಿದ ಈಶ್ವರಪ್ಪ, ಸೋಮಣ್ಣಗೆ ಆರೋಗ್ಯ ಸರಿ ಇಲ್ಲ. ಹಾಗಾಗಿ ಕಾರ್ಯಕ್ರಮಕ್ಕೆ ಬಂದಿಲ್ಲ. ಯಡಿಯೂರಪ್ಪ ಸೋಮಣ್ಣ ನಡುವೆ ಯಾವುದೇ ಮುಸುಕಿನ ಗುದ್ದಾಟ ಇಲ್ಲ. ನಾನು ಕೂಡ ಯಡಿಯೂರಪ್ಪರನವರ ಕೆಲ ಕಾರ್ಯಕ್ರಮಕ್ಕೆ ಹೋಗಿಲ್ಲ. ಇದನ್ನು ಮುಸುಕಿನ ಗುದ್ದಾಟ ಎಂದು ಹೇಳೋಕೆ ಆಗುತ್ತಾ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಬಿಜೆಪಿಯ ವಿಜಯಸಂಕಲ್ಪ ಯಾತ್ರೆಗೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಚಾಲನೆ ನೀಡಿದ್ದರು. ಆದರೆ ಜಿಲ್ಲೆಯ ಉಸ್ತುವಾರಿ ಸಚಿವ ಆಗಿರುವ ವಿ.ಸೋಮಣ್ಣ ಮಾತ್ರ ಯಾತ್ರೆಗೆ ಗೈರಾಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಸ್ವತಃ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಬಂದರೂ, ಯಾತ್ರೆಗೆ ಆಗಮಿಸದ ಸಚಿವ ವಿ.ಸೋಮಣ್ಣ ನಡೆ ಸದ್ಯ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ