
ಬೆಂಗಳೂರು: ಮುಂಬರುವ ವಿಧಾನಸಭೆಯ ಚುನಾವಣೆಗಾಗಿ ಜನಪ್ರಿಯ ವ್ಯಕ್ತಿಗಳಿಗೆ ಪಕ್ಷಗಳು ಗಾಳ ಹಾಕಲು ಶುರು ಮಾಡಿದ್ದಾರೆ. ಈಗಾಗಲೇ ಕೆಲವು ರಾಜಕಾರಣಿಗಳು ಅತ್ತಿಂದಿತ್ತ ಇತ್ತಿಂದತ್ತ ಪಕ್ಷ ಪರ್ಯಟನೆ ಮಾಡುತ್ತಿದ್ದಾರೆ. ಇದೀಗ ಸ್ಯಾಂಡಲ್ವುಡ್ ಖ್ಯಾತ ಸಂಗೀತ ನಿರ್ದೇಶಕ, ಹಾಸ್ಯ ನಟ ಸಾಧು ಕೋಕಿಲಾ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರನ್ನು ಕೆಪಿಸಿಸಿಯ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ಗುರುವಾರ ನೇಮಕ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಈ ನೇಮಕ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಡಿ.ಕೆ ಶಿವಕುಮಾರ್, ‘ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಕನ್ನಡ ನಾಡಿನ ಜನಮೆಚ್ಚಿನ ಕಲಾವಿದ ಸಾಧು ಕೋಕಿಲ ಅವರಿಗೆ ಹಾರ್ದಿಕ ಶುಭಾಷಯಗಳನ್ನು ಕೋರುತ್ತೇವೆ. ತಮ್ಮ ಕಲಾ ಸೇವೆಯೊಂದಿಗೆ ಜನ ಸೇವೆಯೂ ಯಶಸ್ವಿಯಾಗಿ ಮುಂದುವರೆಯಲಿ’ ಎಂದು ಆಶಿಸಿದ್ದಾರೆ. ಸಾಧುಕೋಕಿಲ ಅವರು ಹಲವು ದಿನಗಳಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು. ಮೇಕೆದಾಟು ಪಾದಯಾತ್ರೆಯಲ್ಲಿಯೂ ಅವರು ಕಾಣಿಸಿಕೊಂಡಿದ್ದರು.
ಕನ್ನಡದ ಖ್ಯಾತ ಸಂಗೀತ ನಿರ್ದೇಶಕರಾದ ಸಾಧು ಕೋಕಿಲಾ ಅವರನ್ನು ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ಅಧಿಕೃತವಾಗಿ ಇಂದು ನೇಮಕ ಮಾಡಿ ಶುಭ ಕೋರಿದೆ. ಸಂಗೀತ, ನಿರ್ದೇಶನ, ನಟನೆಯ ಮೂಲಕ ಕನ್ನಡ ನಾಡಿನ ಮನೆಮಾತಾಗಿರುವ ಸಾಧು ಕೋಕಿಲಾ ಅವರು ಕಾಂಗ್ರೆಸ್‌ಗೆ ಇನ್ನಷ್ಟು ಶಕ್ತಿ ತುಂಬುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಶುಭವಾಗಲಿ ಎಂದು ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
Advertisement