ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ; ಎಲ್ಲರ ಚಿತ್ತ ಮಾಜಿ ಸಿಎಂ ಮಾತಿನತ್ತ!

ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯದ ಮುಖಂಡ, ಬಿಜೆಪಿಯನ್ನು ದಕ್ಷಿಣ ಭಾರತದ ರಾಜ್ಯವೊಂದರಲ್ಲಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಕಾರಣೀಭೂತರಾದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಗುರುವಾರ ಬೆಳಗ್ಗೆ 11 ಗಂಟೆಗೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಯಲಿದೆ.
ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯದ ಮುಖಂಡ, ಬಿಜೆಪಿಯನ್ನು ದಕ್ಷಿಣ ಭಾರತದ ರಾಜ್ಯವೊಂದರಲ್ಲಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಕಾರಣೀಭೂತರಾದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಗುರುವಾರ ಬೆಳಗ್ಗೆ 11 ಗಂಟೆಗೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಯಲಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ನಿನ್ನೆಯಷ್ಟೇ ದಿನಾಂಕ ಘೋಷಣೆ ಮಾಡಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣೆಗೆ ಸರಿಸುಮಾರು ಒಂದೂವರೆ ತಿಂಗಳು ಬಾಕಿಯಿದೆಯಷ್ಟೆ, ಈ ಸಮಯದೊಳಗೆ ನೀತಿ ಸಂಹಿತೆ ಜಾರಿಯನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಯಾವ ರೀತಿ ತಂತ್ರ ಮಾಡುತ್ತವೆ, ಚುನಾವಣಾ ಪ್ರಣಾಳಿಕೆಯಲ್ಲಿ ಏನು ಘೋಷಣೆ ಮಾಡುತ್ತವೆ ಮತ್ತು ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಬಹಳ ಮುಖ್ಯವಾಗುತ್ತವೆ.

ಆಡಳಿತಾರೂಢ ಬಿಜೆಪಿ ಇನ್ನೂ 224 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೇ ಬಿಡುಗಡೆ ಮಾಡಿಲ್ಲ, ಕಾಂಗ್ರೆಸ್ ಕಳೆದ ವಾರ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇನ್ನೂ 100 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಗೆ ಕಸರತ್ತು ನಡೆಸುತ್ತಿದೆ. ಜೆಡಿಎಸ್ ಗೆ ಕೂಡ ಹಾಸನ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ ಕಠಿಣ ಸವಾಲಾಗಿದೆ.

ತೀವ್ರ ಕುತೂಹಲ ಕೆರಳಿಸಿದ ಬಿಎಸ್ ವೈ ಸುದ್ದಿಗೋಷ್ಠಿ: ಚುನಾವಣೆ ಹೊಸ್ತಿಲಿನಲ್ಲಿ ಇಂದು ತುರ್ತು ಸುದ್ದಿಗೋಷ್ಠಿ ಕರೆದಿರುವ ಬಿಎಸ್ ವೈ ಏನು ಹೇಳಲಿದ್ದಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. 2021ರಲ್ಲಿ ಪಕ್ಷದೊಳಗಿನ ಅನಿವಾರ್ಯ ಕಾರಣಗಳಿಂದ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಬಿಎಸ್ ವೈ ಖುಷಿಯಿಂದೇನು ಸಿಎಂ ಹುದ್ದೆ ತೊರೆದಿರಲಿಲ್ಲ. ಕಣ್ಣೀರು ಹಾಕುತ್ತಲೇ ಅಧಿಕಾರದಿಂದ ನಿರ್ಗಮಿಸಿದ್ದರು. ನಂತರ ಬಿಜೆಪಿ ಹೈಕಮಾಂಡ್ ಮೇಲೆ ಲಿಂಗಾಯತ ಸಮುದಾಯದವರು ಮುನಿಸಿಕೊಂಡಿದ್ದಾರೆ, ಬಿಜೆಪಿಯಲ್ಲಿ ಬಿಎಸ್ ವೈ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ಪದೇ ಪದೇ ಕೇಳಿಬರುತ್ತಲೇ ಇವೆ.

ಹಾಗೇನು ಇಲ್ಲ, ಹಿರಿಯ ನಾಯಕ ಬಿಎಸ್ ವೈಯವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುತ್ತಿದೆ, ಅವರ ಪುತ್ರ ವಿಜಯೇಂದ್ರನಿಗೂ ಸೂಕ್ತ ಗೌರವ ನೀಡಲಾಗುತ್ತದೆ ಎಂಬಂತೆ ಮೊನ್ನೆಯಷ್ಟೇ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ತಮ್ಮ ನಡೆಯಿಂದ ಸೂಚ್ಯವಾಗಿ ತೋರಿಸಿಕೊಟ್ಟಿದ್ದರು. ಕಳೆದ ತಿಂಗಳು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ಪ್ರಧಾನಿ ಮೋದಿ ಸಹ ಯಡಿಯೂರಪ್ಪನವರ ಕೈ ಹಿಡಿದು ಸಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com