
ಹುಬ್ಬಳ್ಳಿ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ ಭಜರಂಗದಳ (Bajarang Dal)ನಿಷೇಧ ವಿವಾದದ ಕಿಡಿ ಹತ್ತಿಸಿದೆ. ಬಿಜೆಪಿ ನಾಯಕರು ಹಾಗೂ ಹಿಂದೂಪರ ಸಂಘಟನೆಗಳು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಡಿಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುವಾಗ, ಆಂಜನೇಯನಿಗೂ ಭಜರಂಗದಳಕ್ಕೂ ಏನು ಸಂಬಂಧ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ‘ರಾಮನಿಗೂ ಹನುಮನಿಗೂ ಯಾವ ರೀತಿ ಸಂಬಂಧ ಇದೆಯೋ, ಅದೇ ರೀತಿಯ ಸಂಬಂಧ ಹನುಮನಿಗೂ ಭಜರಂಗದಳಕ್ಕೂ ಇದೆ. ಇದನ್ನು ಕಾಂಗ್ರೆಸ್ ಪಕ್ಷ ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಕಾಂಗ್ರೆಸ್ ವರ್ತಿಸುತ್ತಿದೆ. ಜನರ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಮಾತನಾಡೋದು ಸರಿಯಲ್ಲ. ನಾವು ನಮ್ಮ ಕಾರ್ಯಕ್ರಮಗಳ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಅವರು ಅವರ ಭರವಸೆಗಳ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ. ಅನಾವಶ್ಯಕವಾಗಿ ಕೆದಕಿ ಚುನಾವಣೆಯ ವಾತಾವರಣವನ್ನು ಜಾತಿ, ಧರ್ಮ, ಕೋಮು ಭಾವನೆಗಳಿಂದ ಕೆರಳಿಸುವುದು ಸರಿಯಲ್ಲ. ಇದು ಕಾಂಗ್ರೆಸ್ನ ತುಷ್ಟೀಕರಣ ರಾಜಕಾರಣ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಇಂದು ಎಸ್ ಡಿಪಿಐ ಮತ್ತು ಪಿಎಫ್ಐ ಕಪಿಮುಷ್ಟಿಯಲ್ಲಿದೆ. ಅದರಿಂದ ಹೊರಬರಲು ಸಾಧ್ಯವಿಲ್ಲ. ಅವರ ಒತ್ತಡಕ್ಕೆ ಮಣಿಯುತ್ತಿದ್ದಾರೆ. ನಾವು ಎಸ್ ಡಿಪಿಐ, ಪಿಎಫ್ಐ ವಿರುದ್ಧ ಮಾತಾಡ್ತೇವೆ ಅಂದರೆ ಕಾಂಗ್ರೆಸ್ ನಾಯಕರಿಗೆ ತಳಮಳ ಶುರುವಾಗುತ್ತೆ. ಪಿಎಫ್ಐ ಬ್ಯಾನ್ ಆಗಿದ್ದರೂ ತಮ್ಮ ಪರವಾಗಿ ಮಾತನಾಡುತ್ತಿಲ್ಲ ಎಂದು ಅಸಮಾಧಾನ ಇದೆ. ನಮಗೆ ರಕ್ಷಣೆ ಕೊಡುತ್ತಿಲ್ಲ, ನಾವ್ಯಾಕೆ ನಿಮಗೆ ರಕ್ಷಣೆ ಕೊಡಬೇಕು ಎಂದು ಪಿಎಫ್ಐ ನಾಯಕರು ಪ್ರಶ್ನಿಸುತ್ತಿದ್ದಾರೆ. ಪಿ.ಎಫ್.ಐ ನ ಇನ್ನೊಂದು ರೂಪ ಎಸ್.ಡಿ.ಪಿ.ಐ, ಇದರ ಬೆಂಬಲವನ್ನು ಕಾಂಗ್ರೆಸ್ ಬಹಿರಂಗವಾಗಿ ಕೇಳಿತ್ತು. ಆದರೆ ಅವರು ಕೊಡಲ್ಲ ಎಂದಿದ್ದಾರೆ ಎಂದರು.
ಕಾಂಗ್ರೆಸ್ನ ಕಾಲದಲ್ಲಿ ಎಸ್ ಡಿಪಿಐ, ಪಿಎಫ್ಐ ಪ್ರಬಲವಾಗಿ ಬೆಳೆದಿದ್ದವು. ಬಾಲವೇ ದೇಹವನ್ನು ಅಲುಗಾಡಿಸಿದಂತಹ ಸ್ಥಿತಿ ಇದೆ. ಎಸ್ ಡಿಪಿಐ, ಬಿಜೆಪಿಯ ಬಿಟೀಂ ಅಲ್ಲ, ಬಿ ಟೀಂ ಆಗಿದ್ದರೆ ನಾವು ಪಿ.ಎಫ್.ಐ ಬ್ಯಾನ್ ಮಾಡ್ತಿದ್ದೆವಾ, ತಾವು ಮಾಡಿದ ತಪ್ಪನ್ನು ಮುಚ್ಚಲು ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದು ಸಿಎಂ ವಾಗ್ದಾಳಿ ನಡೆಸಿದರು.
Advertisement