ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ, ಕೊನೆಯ ದಿನ ಘಟಾನುಘಟಿ ನಾಯಕರಿಂದ ಭರ್ಜರಿ ಶಕ್ತಿ ಪ್ರದರ್ಶನ!

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇರಡು ದಿನಗಳಷ್ಟೇ ಬಾಕಿ ಉಳಿದಿದ್ದು, ಬಹಿರಂಗ ಪ್ರಚಾರಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ. ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಬಿಜೆಪಿ, ಕಾಂಗ್ರೆಸ್ , ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಅಬ್ಬರದ ರೋಡ್ ಶೋ,  ಪ್ರಚಾರ ಸಭೆಗಳ ಮೂಲಕ ಭರ್ಜರಿ ಶಕ್ತಿ ಪ್ರದರ್ಶನ ನಡೆಸಿದರು.
ಸಿಎಂ ಬೊಮ್ಮಾಯಿ, ಡಿಕೆ ಶಿವಕುಮಾರ್, ಹೆಚ್ ಡಿ ದೇವೇಗೌಡ ಅವರ ಪ್ರಚಾರದ ಚಿತ್ರ
ಸಿಎಂ ಬೊಮ್ಮಾಯಿ, ಡಿಕೆ ಶಿವಕುಮಾರ್, ಹೆಚ್ ಡಿ ದೇವೇಗೌಡ ಅವರ ಪ್ರಚಾರದ ಚಿತ್ರ
Updated on

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇರಡು ದಿನಗಳಷ್ಟೇ ಬಾಕಿ ಉಳಿದಿದ್ದು, ಬಹಿರಂಗ ಪ್ರಚಾರಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ. ಪ್ರಮುಖ ರಾಜಕೀಯ ಪಕ್ಷಗಳ ನಾಯಕರು  ಸ್ಟಾರ್ ಪ್ರಚಾರಕರು ಹಾಗೂ  ಆಯಾ ಕ್ಷೇತ್ರಗಳ ಮತಪಟ್ಟಿಯಲ್ಲಿ ಹೆಸರಿಲ್ಲದ ರಾಜಕೀಯ ನಾಯಕರುಗಳೂ ಸೇರಿದಂತೆ ಎಲ್ಲ ಮುಖಂಡರು ಕ್ಷೇತ್ರ ತೊರೆದಿದ್ದು, ಯಾವುದೇ ಅಭ್ಯರ್ಥಿ ಧ್ವನಿ ವರ್ಧಕಗಳನ್ನು ಬಳಸಿ, ಸಮಾವೇಶ, ರೋಡ್ ಶೋಗಳ ಮೂಲಕ ಮತಯಾಚಿಸುವಂತಿಲ್ಲ. ಆದರೆ, ಅಭ್ಯರ್ಥಿಗಳು ಮಾತ್ರ ಮನೆ ಮನೆಗೆ ತೆರಳಿ ಮಂಗಳವಾರ ಸಂಜೆ 6 ಗಂಟೆಯವರೆಗೂ ಮತ ಕೇಳಬಹುದು.

ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಅಬ್ಬರದ ರೋಡ್ ಶೋ,  ಪ್ರಚಾರ ಸಭೆಗಳ ಮೂಲಕ ಭರ್ಜರಿ ಶಕ್ತಿ ಪ್ರದರ್ಶನ ನಡೆಸಿದರು. ಈ  ಮೂಲಕ ಮತದಾರರನ್ನು ಓಲೈಸಿಕೊಳ್ಳಲು ಅಂತಿಮ ಕಸರತ್ತು ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪ್ರಚಾರ ನಿನ್ನೆಯೇ ಅಂತ್ಯಗೊಂಡಿತ್ತು. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ತವರು ಕ್ಷೇತ್ರ ಶಿಗ್ಗಾಂವಿ-ಸವಣೂರಿನ ವನಹಳ್ಳಿ, ಹನುಮನಹಳ್ಳಿ, ಹಿರೇಮಲ್ಲೂರು ಗ್ರಾಮಗಳಿಗೆ ಭೇಟಿ ನೀಡಿ, ಬಿರುಸಿನ ಪ್ರಚಾರ ನಡೆಸಿದರು. 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ದಕ್ಷಿಣದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಜನಪರ ಆಡಳಿತಕ್ಕಾಗಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕೊನೆಗಾಣಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕರೆ ನೀಡಿದರು.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕೆಫೆ ಕಾಫಿಡೇ ನಲ್ಲಿ ಚಹಾ ಸೇವಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಂತರ ಬಿಎಂಟಿಸಿ ಬಸ್ ನಲ್ಲಿ ಸಂಚರಿಸಿದ ರಾಹುಲ್, ಪ್ರಯಾಣಿಕರ ಕುಂದು ಕೊರತೆಗಳನ್ನು ಆಲಿಸಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ವಿಜಯನಗರ ಹಾಗೂ ಗೋವಿಂದ ರಾಜ ನಗರ ಕ್ಷೇತ್ರದಲ್ಲಿ ರೋಡ್ ಶೋ ನಡೆಸುವ ಮೂಲಕ ಪಕ್ಷದ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು.

ಕನಕಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಅದ್ದೂರಿ ಸ್ವಾಗತ ದೊರೆಯಿತು.  ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ, ಪಕ್ಷದ ಅಭ್ಯರ್ಥಿ ಗಣೇಶ್ ಪ್ರಸಾದ್ ಪರ ಮತಯಾಚಿಸಿದರು.

ಇತ್ತ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com