ಮತಗಟ್ಟೆ ಸಮೀಕ್ಷೆಯಲ್ಲಿ 'ಕೈ' ಮೇಲು: ಸಿದ್ದರಾಮಯ್ಯ ನಿವಾಸದಲ್ಲಿ ಗರಿಗೆದರಿದ ಕಾಂಗ್ರೆಸ್ ನಾಯಕರ ರಣತಂತ್ರ!

ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023ಕ್ಕೆ ಮತದಾನ ಮುಗಿದು ಎಲ್ಲರೂ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ನಿನ್ನೆ ಸಾಯಂಕಾಲ ಹೊರಬಿದ್ದ ಬಹುತೇಕ ಮತದಾನೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಗೆ ಈ ಬಾರಿ ಬಹುಮತ ಸಿಗಲಿದೆ.
ರಂದೀಪ್ ಸಿಂಗ್ ಸುರ್ಜೆವಾಲಾ-ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್
ರಂದೀಪ್ ಸಿಂಗ್ ಸುರ್ಜೆವಾಲಾ-ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್

ಬೆಂಗಳೂರು: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023ಕ್ಕೆ ಮತದಾನ ಮುಗಿದು ಎಲ್ಲರೂ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ನಿನ್ನೆ ಸಾಯಂಕಾಲ ಹೊರಬಿದ್ದ ಬಹುತೇಕ ಮತದಾನೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಗೆ ಈ ಬಾರಿ ಬಹುಮತ ಸಿಗಲಿದೆ. ಸ್ಪಷ್ಟ ಬಹುಮತಕ್ಕೆ ಕೆಲವು ಸ್ಥಾನಗಳು ಬೇಕಾಗಬಹುದು ಎಂಬಿತ್ಯಾದಿ ಸಮೀಕ್ಷೆಗಳು ಬಂದಿದ್ದು ಫಲಿತಾಂಶಕ್ಕೆ ಮುನ್ನ ಕಾಂಗ್ರೆಸ್ ಪಾಳೆಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. 

ಒಂದು ವೇಳೆ ಪೂರ್ಣ ಬಹುಮತ ಬರದೆ ಸರ್ಕಾರ ರಚಿಸಲು ಕೆಲವೇ ಸ್ಥಾನಗಳು ಬೇಕಾದರೆ ಏನು ಮಾಡಬಹುದು ಎಂಬ ಬಗ್ಗೆ ಕಾಂಗ್ರೆಸ್ ನಾಯಕರು ಗಂಭೀರ ಚರ್ಚೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ನೇತೃತ್ವದಲ್ಲಿ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ರಾಜಕೀಯ ತಂತ್ರಗಾರಿಕೆ ಚರ್ಚೆ, ಮಾತುಕತೆಗಳು ನಡೆದಿವೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ನಲ್ಲಿ ಫಲಿತಾಂಶಕ್ಕೂ ಮುನ್ನ ಘಟಾನುಘಟಿ ನಾಯಕರಿಂದ ರಣತಂತ್ರಗಳು ನಡೆಯುತ್ತಿದ್ದು ಸರಣಿ ಮೀಟಿಂಗ್ ಗಳು ನಡೆಯುತ್ತಿವೆ. ಸುರ್ಜೆವಾಲಾ ಮತ್ತು ಸಿದ್ದರಾಮಯ್ಯ ನಡುವೆ ಸುಮಾರು 2 ಗಂಟೆಗಳ ಕಾಲ ಮಾತುಕತೆ ನಡೆದಿದೆ ಇಂದು ಸಂಜೆ 6 ಗಂಟೆಗೆ ಕಾಂಗ್ರೆಸ್ ನಾಯಕರು ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.  ಅದರಲ್ಲಿ ಡಿ.ಕೆ. ಶಿವಕುಮಾರ್ ಭಾಗಿಯಾಗುವ ಸಾಧ್ಯತೆಯಿದೆ.

ಶತಾಯಗತಾಯ ಈ ಬಾರಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಡದೆ ಸರ್ಕಾರ ರಚಿಸಲು ಕಾಂಗ್ರೆಸ್ ಶತಪ್ರಯತ್ನ ಮಾಡುತ್ತಿದೆ. ಬಹುಮತ ಬಂದರೆ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ, ಒಂದು ವೇಳೆ ಬಹುಮತ ಬಾರದಿದ್ದರೆ ಆಪರೇಷನ್ ಹಸ್ತ ನಡೆಸುವ ವಿಚಾರ ಮತ್ತು ಬಿಜೆಪಿಗೆ ಶಾಸಕರು ಹೋಗದಂತೆ ಹೇಗೆ ಹಿಡಿದಿಟ್ಟುಕೊಳ್ಳಬೇಕು ಎಂಬ ಬಗ್ಗೆ ಕೂಡ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com