'ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ; ಪರಾಜಯದಿಂದ ಪಾಠ ಕಲಿತು, ಪುನಃ ಪುಟಿದೇಳುತ್ತೇನೆ'

2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಎದುರು ಸೋತಿದ್ದ ಜೆಡಿಎಸ್‌ ಮುಖಂಡ ನಿಖಿಲ್‌ ಕುಮಾರಸ್ವಾಮಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲೂ ಸೋಲನುಭವಿಸಿದ್ದಾರೆ.
ನಿಖಿಲ್ ಮತ್ತು ದೇವೇಗೌಡ
ನಿಖಿಲ್ ಮತ್ತು ದೇವೇಗೌಡ
Updated on

ಬೆಂಗಳೂರು: 2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಎದುರು ಸೋತಿದ್ದ ಜೆಡಿಎಸ್‌ ಮುಖಂಡ ನಿಖಿಲ್‌ ಕುಮಾರಸ್ವಾಮಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲೂ ಸೋಲನುಭವಿಸಿದ್ದಾರೆ.

ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಿಖಿಲ್‌ ಕುಮಾರಸ್ವಾಮಿ, ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್ ಹುಸೇನ್ ಎದುರು 10,715 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನಿಖಿಲ್‌ ಕುಮಾರಸ್ವಾಮಿ ಫೇಸ್‌ಬುಕ್‌ನಲ್ಲಿ ಭಾವುಕ ಪೋಸ್ಟ್‌ ಬರೆದುಕೊಂಡಿದ್ದಾರೆ.

ನನ್ನನ್ನು ಅತ್ಯಂತ ಪ್ರೀತಿಯಿಂದ ಬೆಂಬಲಿಸಿ ಆಶೀರ್ವದಿಸಿದ ರಾಮನಗರ ವಿಧಾನಸಭೆ ಕ್ಷೇತ್ರದ ಮಹಾಜನತೆಗೆ ನನ್ನ ಶಿರಸಾಷ್ಟಾಂಗ ನಮನಗಳು.

ಈ ಒಂದು ಸೋಲು ನಿಮ್ಮ ಸೇವೆ ಮಾಡಬೇಕು ಎನ್ನುವ ನನ್ನ ಅದಮ್ಯ ಸಂಕಲ್ಪಕ್ಕೆ ತಡೆ ಒಡ್ಡಲಾರದು. ನಾನೆಂದೂ ನಿಮ್ಮ ಜತೆಯಲ್ಲೇ ಇರುತ್ತೇನೆ, ನಿಮಗಾಗಿ ಜೀವಿಸುತ್ತೇನೆ.

ಸೋಲನ್ನು ಸಮಚಿತ್ತದಿಂದ ಸ್ವಿಕರಿಸಿ ಮುನ್ನಡೆಯುತ್ತೇನೆ. ಅದು ನಾನು ನನ್ನ ಪೂಜ್ಯ ತಾತನವರಾದ ಶ್ರೀ ಹೆಚ್.ಡಿ.ದೇವೇಗೌಡ ಸಾಹೇಬರಿಂದ, ತಂದೆ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಕಲಿತ ಪಾಠ. ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ. ಬಿದ್ದ ಮಗುವನ್ನು ಮೇಲೆತ್ತುವ ನಿಮ್ಮ ಪ್ರೀತಿ, ವಾತ್ಸಲ್ಯವನ್ನು ನಾನು ಬಲ್ಲೆ ಎಂದು ನಿಖಿಲ್ ಬರೆದುಕೊಂಡಿದ್ದಾರೆ.

ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಜಾತ್ಯತೀತ ಜನತಾದಳವನ್ನು ಹರಸಿದ ಸಾರ್ವಜನಿಕ ಬಂಧುಗಳನ್ನು ಇಲ್ಲಿ ಸ್ಮರಿಸುತ್ತೇನೆ. ಸೋಲಿನಿಂದ ಕಂಗೆಟ್ಟು ಜನರಿಂದ ದೂರವಾಗುವ ಜಾಯಮಾನ ನಮ್ಮದಲ್ಲ. ಈ ಪರಾಜಯದಿಂದ ಪಾಠ ಕಲಿಯುತ್ತೇವೆ, ಪುನಾ ಪುಟಿದೆದ್ದು ಬರುತ್ತೇವೆ. ಪ್ರತಿಯೊಬ್ಬರಿಗೂ ಪ್ರಣಾಮಗಳು ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com