ಕರ್ನಾಟಕ ಸಿಎಂ ಆಯ್ಕೆಯಲ್ಲಿ ಮುಂದುವರಿದ 'ಹೈ' ಟೆನ್ಷನ್, ಇಂದು ಡಿಕೆಶಿ ಸೋನಿಯಾ ಭೇಟಿ ಸಾಧ್ಯತೆ: ಗೊಂದಲಕ್ಕೆ ಇಂದೇ ತೆರೆ ಎಳೆಯುತ್ತಾರಾ ಖರ್ಗೆ?

ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದು ಕಾಂಗ್ರೆಸ್ ಗೆ 135 ಸೀಟುಗಳು ಸಿಕ್ಕಿದ ನಂತರವೂ ಪಕ್ಷದಲ್ಲಿ ಸಿಎಂ ಯಾರಾಗಬೇಕೆಂಬ ನಿರ್ಧಾರಕ್ಕೆ ಇನ್ನೂ ಬರಲು ಸಾಧ್ಯವಾಗಿಲ್ಲ. ಸಿಎಂ ಆಯ್ಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೊಂದಲ ಮುಂದುವರಿದಿದೆ. 
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್
Updated on

ನವದೆಹಲಿ/ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದು ಕಾಂಗ್ರೆಸ್ ಗೆ 135 ಸೀಟುಗಳು ಸಿಕ್ಕಿದ ನಂತರವೂ ಪಕ್ಷದಲ್ಲಿ ಸಿಎಂ ಯಾರಾಗಬೇಕೆಂಬ ನಿರ್ಧಾರಕ್ಕೆ ಇನ್ನೂ ಬರಲು ಸಾಧ್ಯವಾಗಿಲ್ಲ. ಸಿಎಂ ಆಯ್ಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೊಂದಲ ಮುಂದುವರಿದಿದೆ. 

ಸಿದ್ದರಾಮಯ್ಯ(Siddaramaiah) ಮತ್ತು ಡಿ ಕೆ ಶಿವಕುಮಾರ್(D K Shivakumar) ನಡುವೆ ಸಿಎಂ ಕುರ್ಚಿಗಾಗಿ ಹಗ್ಗಜಗ್ಗಾಟ ಮುಂದುವರಿಸಿರುವುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge), ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಸಮಸ್ಯೆಯಾಗಿದೆ. 

ಇಂದು ಖರ್ಗೆ ನಿವಾಸದಲ್ಲಿ ಹೈ ವೋಲ್ಟೇಜ್ ಮೀಟಿಂಗ್: ಮೊನ್ನೆಯೇ ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದರು. ನಿನ್ನೆ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೂಡ ದೆಹಲಿಗೆ ತೆರಳಿ ಖರ್ಗೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಿನ್ನೆ ದಿನವಿಡೀ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸತತ ಸಭೆಗಳು, ಚರ್ಚೆಗಳು ನಡೆದರೂ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.

ಇಂದು ಡಿಕೆಶಿ ಸೋನಿಯಾ ಭೇಟಿ ಸಾಧ್ಯತೆ: ಬಲ್ಲ ಮೂಲಗಳ ಪ್ರಕಾರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರಿಗೆ ಡಿ ಕೆ ಶಿವಕುಮಾರ್ ಆಪ್ತರು, ಕಾಂಗ್ರೆಸ್ ಕಷ್ಟದ ಕಾಲದಲ್ಲಿ ಪಕ್ಷದ ಪರವಾಗಿ, ನಾಯಕರ ಪರವಾಗಿ ನಿಂತವರು ಡಿ ಕೆ ಶಿವಕುಮಾರ್, ಕಾಂಗ್ರೆಸ್  ಪಕ್ಷದಲ್ಲಿ ಟ್ರಬಲ್ ಶೂಟರ್ ಎಂದೇ ಜನಪ್ರಿಯರು. ಹೀಗಾಗಿ ಅವರಿಗೆ ಸಿಎಂ ಸ್ಥಾನ ನೀಡಲು ಸೋನಿಯಾ ಗಾಂಧಿಯವರಿಗೆ ಒಲವು ಎನ್ನಲಾಗುತ್ತಿದೆ.

ನಿನ್ನೆ ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇಬ್ಬರೂ ಮಾತುಕತೆ ನಡೆಸಿದರೂ ಒಮ್ಮತಕ್ಕೆ ಬರುವಲ್ಲಿ ವಿಫಲರಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಒಲವು ಹೊಂದಿದ್ದರೂ, ಶಿವಕುಮಾರ್ ಅವರನ್ನು ಅಸಮಾಧಾನಗೊಳಿಸಲು ಪಕ್ಷವು ಬಯಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಶಿವಕುಮಾರ್ ಅವರಿಗೆ ಸಿದ್ದರಾಮಯ್ಯನವರ ಉಪನಾಯಕನಾಗಲು ಕಾಂಗ್ರೆಸ್ ಆಫರ್ ನೀಡಿತ್ತು ಎನ್ನಲಾಗಿದೆ. ಆದರೆ ಡಿ ಕೆ ಶಿವಕುಮಾರ್ ಅದಕ್ಕೆ ನಿರಾಕರಿಸಿದ್ದಾರೆ. 

ಇಂದು ರಾಹುಲ್ ಗಾಂಧಿ ಜೊತೆಗೂ ಮಾತುಕತೆ: ಇನ್ನೊಂದೆಡೆ ಇಂದು ಕನಕಪುರ ಬಂಡೆ ಡಿಕೆಶಿ ಮಧ್ಯಾಹ್ನ ರಾಹುಲ್ ಗಾಂಧಿಯವರನ್ನು ಸಹ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. 

ಕರ್ನಾಟಕದಲ್ಲಿ 224 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗಳಿಸುವ ಮೂಲಕ ಭಾರಿ ಗೆಲುವು ದಾಖಲಿಸಿದೆ. ಮತ್ತೊಂದೆಡೆ, ಭಾರತೀಯ ಜನತಾ ಪಕ್ಷ (BJP) ಕೇವಲ 66 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ ಜಾತ್ಯತೀತ ಜನತಾ ದಳ (JDS) 19 ಸ್ಥಾನಗಳನ್ನು ಗೆದ್ದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com