ಜೂನ್ 1ಕ್ಕೆ ಎರಡನೇ ಸಚಿವ ಸಂಪುಟ ಸಭೆ: ಅಂದೇ ಕಾಂಗ್ರೆಸ್ '5 ಗ್ಯಾರಂಟಿ' ಯೋಜನೆಗಳ ಜಾರಿ?

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 15 ದಿನಗಳು ಕಳೆದಿದೆ. ಚುನಾವಣಾ ಪೂರ್ವ ಭರವಸೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ಪ್ರತಿಪಕ್ಷಗಳ ನಾಯಕರು ಆಗ್ರಹಿಸುತ್ತಿದ್ದರೆ ಇತ್ತ ಸಾರ್ವಜನಿಕರು ಕೂಡ ಒತ್ತಡ ಹಾಕುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ(ಸಂಗ್ರಹ ಚಿತ್ರ)
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ(ಸಂಗ್ರಹ ಚಿತ್ರ)

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 15 ದಿನಗಳು ಕಳೆದಿದೆ. ಚುನಾವಣಾ ಪೂರ್ವ ಭರವಸೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ಪ್ರತಿಪಕ್ಷಗಳ ನಾಯಕರು ಆಗ್ರಹಿಸುತ್ತಿದ್ದರೆ ಇತ್ತ ಸಾರ್ವಜನಿಕರು ಕೂಡ ಒತ್ತಡ ಹಾಕುತ್ತಿದ್ದಾರೆ.

ಗ್ಯಾರಂಟಿ ಹೆಸರಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್, ಕೊನೆಗೂ ಯೋಜನೆ ಜಾರಿಗೆ ಮುಂದಾಗಿದೆ.ಜೂನ್ 1ರಂದು ಸಚಿವ ಸಂಪುಟ ಸಭೆ ನಡೆಸಿ ಅಂದೇ ಗ್ಯಾರಂಟಿ ಘೋಷಿಸುವ ನಿರೀಕ್ಷೆ ಇದೆ. ಗ್ಯಾರಂಟಿಗಳ ಜಾರಿ ಸಮಸ್ಯೆ ಬಗೆಹರಿಸಲು ವಿಶೇಷ ಸಮಿತಿ ರಚನೆಗೆ ಸರ್ಕಾರ ಮುಂದಾಗಿದೆ.

ಈ ಬಗ್ಗೆ ನಿನ್ನೆ ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿದ್ದ ಡಿಸಿಎಂ ಡಿ ಕೆ ಶಿವಕುಮಾರ್, ಬಿಜೆಪಿಯವರು ಟೀಕೆ ಮಾಡಿದಷ್ಟೂ ನಮ್ಮ ಗ್ಯಾರಂಟಿಗಳಿಗೆ ಹೆಚ್ಚು ಪ್ರಚಾರ ಸಿಗುತ್ತದೆ. ಗ್ಯಾರಂಟಿ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಮಾರ್ಗಸೂಚಿ ಸಿದ್ಧಪಡಿಸಿಕೊಂಡು ಜೂನ್‌ 1ರಂದು ಸಚಿವ ಸಂಪುಟ ಸಭೆ ನಡೆಸುತ್ತೇವೆ. ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದ್ದಾರೆ.

ನೇರವಾಗಿ ಯೋಜನೆ ಅನುಷ್ಠಾನ ಮಾಡಲು ಆಗುವುದಿಲ್ಲ. ಕೆಲವು ಸಿದ್ಧತೆಗಳು ಬೇಕಿರುತ್ತವೆ. ಉದಾ: ಗೃಹ ಲಕ್ಷ್ಮೀ ಯೋಜನೆಯಲ್ಲಿ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರುಪಾಯಿ ನೀಡುತ್ತೇವೆ ಎಂದು ಹೇಳಿದ್ದೇವೆ. ಕೆಲವು ಮನೆಯಲ್ಲಿ ವ್ಯಕ್ತಿಯ ಪತ್ನಿ ಹಾಗೂ ತಾಯಿ ಇಬ್ಬರೂ ಇರುತ್ತಾರೆ. ಪತ್ನಿ ಖಾತೆಗೆ ಹಣ ಹಾಕಬೇಕೆ ಅಥವಾ ತಾಯಿಯ ಖಾತೆಗೆ ಹಣ ಹಾಕಬೇಕೆ ಎಂಬುದು ಮೊದಲು ತೀರ್ಮಾನ ಆಗಬೇಕು. ಅವರಿಗೆ ಬ್ಯಾಂಕ್‌ ಖಾತೆ ಇಲ್ಲದಿದ್ದರೆ ಮಾಡಿಸಬೇಕು. ಗೌರವವಾಗಿ ಯೋಜನೆ ತಲುಪಿಸಬೇಕು ಎಂದು ವಿವರಿಸಿದರು.

ವಿದ್ಯುತ್‌ ಬಿಲ್‌ 200 ಯುನಿಟ್‌ವರೆಗೆ ಕಟ್ಟಬೇಕಿಲ್ಲ ಎಂದು ಹೇಳಿದ್ದೆವು. ಬಾಡಿಗೆ ಮನೆಯಲ್ಲಿದ್ದರೂ ಅವರಿಗೆ ಪರಿಶೀಲಿಸಿ ಏನಾದರೂ ಅನುಕೂಲ ಮಾಡಬಹುದು. ಇವೆಲ್ಲವನ್ನೂ ಚರ್ಚೆ ಮಾಡಲು ಜೂ.1ರಂದು ಸಚಿವ ಸಂಪುಟ ಸಭೆ ನಡೆಯಲಿದೆ. ಈ ವೇಳೆ ಎಲ್ಲವನ್ನೂ ಚರ್ಚಿಸಿ ಅನುಷ್ಠಾನ ಮಾಡುತ್ತೇವೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು ಎಲ್ಲಾ ಸಚಿವರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com