ಕಾಗದ ಮೇಲಿನ ಮೆಗಾವ್ಯಾಟು ಲೆಕ್ಕ ಬದಿಗಿಟ್ಟು, ಮೊದಲು ಸಮರ್ಪಕ ವಿದ್ಯುತ್‌ ನೀಡಿ: ಸಿದ್ದರಾಮಯ್ಯಗೆ ಬಿಜೆಪಿ ತಾಕೀತು

ಕಾಗದ ಮೇಲಿನ ಮೆಗಾವ್ಯಾಟು ಲೆಕ್ಕ ಬದಿಗಿಟ್ಟು, ಮೊದಲು ಸಮರ್ಪಕ ವಿದ್ಯುತ್‌ ನೀಡಿ ಎಂದು ಪ್ರತಿಪಕ್ಷ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಾಕೀತು ಮಾಡಿದೆ.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಬೆಂಗಳೂರು: ಕಾಗದ ಮೇಲಿನ ಮೆಗಾವ್ಯಾಟು ಲೆಕ್ಕ ಬದಿಗಿಟ್ಟು, ಮೊದಲು ಸಮರ್ಪಕ ವಿದ್ಯುತ್‌ ನೀಡಿ ಎಂದು ಪ್ರತಿಪಕ್ಷ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಾಕೀತು ಮಾಡಿದೆ.

ರಾಜ್ಯದಲ್ಲಿ ನೀರಾವರಿ ಪಂಪ್‍ಸೆಟ್‍ಗಳಿಗೆ 7 ಗಂಟೆಗಳ ವಿದ್ಯುತ್ ಸರಬರಾಜು ಮಾಡಲಾಗುವುದು ಎಂಬ ಮುಖ್ಯಮಂತ್ರಿ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ, ಮೊದಲು 5 ತಾಸು ವಿದ್ಯುತ್‌ ಕೊಡುತ್ತೇವೆ ಎಂದು ರೈತರು ವಿದ್ಯುತ್‌ಗೆ ನಿದ್ದೆಗೆಟ್ಟು ಕಾದು ಕೂರುವಂತೆ ಮಾಡಿದಿರಿ. ಕಾದು ಕಾದು ಬೆಳೆ ಒಣಗಿತೇ ವಿನಃ ಪಂಪ್‌ಸೆಟ್‌ಗಳಿಗೆ ಕರೆಂಟೇ ಬರಲಿಲ್ಲ. ಐದು ತಾಸೇ ಸರಿಯಾಗಿ ಕೊಡಲಾಗದಿದ್ದವರು ಈಗ ಏಳು ತಾಸು ಕೊಡುತ್ತೇವೆ ಎಂದು ಮಂಕುಬೂದಿ ಎರಚುವ ಕೆಲಸ ಮಾಡುತ್ತಿದ್ದೀರಿ. ಕಾಗದದ ಮೇಲಿನ ಮೆಗಾವ್ಯಾಟುಗಳ ಲೆಕ್ಕ ಬದಿಗಿಡಿ, ಮೊದಲು ಸಮರ್ಪಕ ವಿದ್ಯುತ್‌ ನೀಡಿ, ಆಮೇಲೆ ಮಾತನಾಡಿ ಎಂದು ಒತ್ತಾಯಿಸಿದೆ.

ಮತ್ತೊಂದೆಡೆ ಪ್ರತಿಕ್ರಿಯಿಸಿರುವ ಹಿರಿಯ ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ, ರಾಜ್ಯ ಕಾಂಗ್ರೆಸ್ ಸರ್ಕಾರ ಬದುಕಿದ್ದೂ ಸತ್ತಂತೆ ವರ್ತಿಸುತ್ತಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಮತ್ತೊಂದು ಕಡೆ ವಿದ್ಯುತ್ ಬೆಲೆ ಏರಿಕೆ ಮಾಡಿದ್ದಾರೆ. ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವೈಫಲ್ಯಗಳಿಗೆಲ್ಲಾ ಕೇಂದ್ರ ಸರ್ಕಾರವನ್ನು ಬೊಟ್ಟು ಮಾಡುವ ಹಳೇ ಚಾಳಿಯನ್ನೇ ಮುಂದುವರಿಸಿದ್ದಾರೆ. ಬರ ಪರಿಸ್ಥಿತಿ ವಿವರಣೆಗೆ ಕೇಂದ್ರ ಸರ್ಕಾರದ ಬಳಿಗೆ ಸರ್ವಪಕ್ಷಗಳ ನಿಯೋಗ ಕಟ್ಟಿಕೊಂಡು ಹೋಗುವ ಮಾತುಗಳನ್ನಾಡಲು ಶುರು ಮಾಡಿದ್ದಾರೆ. ಸರ್ವಪಕ್ಷಗಳ ನಿಯೋಗಕ್ಕಿಂತಲೂ ಮೊದಲು, ನೀವು ಕೊಡಿಸಿದ ಹೊಸ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿರುವ ನಿಮ್ಮ ಶಾಸಕರಿಗೆ ಎಸಿ ಕಾರಿನಿಂದ ಕೆಳಗಿಳಿದು ಬಿಸಿಲು ಹೇಗಿದೆ ಎಂದಾದರೂ ನೋಡಲು ಹೇಳಿ ಎಂದು ಬಿಜೆಪಿ ತಾಕೀತು ಮಾಡಿದೆ. 

ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಕಾನೂನು ಸುವ್ಯವಸ್ಥೆ ಈಗಾಗಲೇ ನಗರಗಳಲ್ಲಿ ಸಂಪೂರ್ಣ ಹದಗೆಟ್ಟಿದೆ. ಬರದ ಬೇಗೆಯಿಂದಾಗಿ ಹಳ್ಳಿಗಳಲ್ಲೂ ಕಳ್ಳತನ-ಸುಲಿಗೆ ನಡೆಯುವ ಮೊದಲು ಎಚ್ಚೆತ್ತುಕೊಂಡು ನಿಮ್ಮ ಜವಾಬ್ದಾರಿ ನಿರ್ವಹಿಸಿ. ಮುಂದಿನ ಮುಂಗಾರು ಚುರುಕಾಗುವವರೆಗಾದರೂ ನಿಮ್ಮ ಕಲೆಕ್ಷನ್‌ ವ್ಯವಹಾರಕ್ಕೆ ಬ್ರೇಕ್‌ ಹಾಕಿ ಎಂಬುದು ನಮ್ಮ ಕಳಕಳಿಯ ಕೋರಿಕೆ ಎಂದು ಮತ್ತೊಂದು ಟ್ವೀಟ್ ನಲ್ಲಿ  ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com