ವಿಜಯೇಂದ್ರಗೆ ಸಾರಥ್ಯ: ಹಿಂದೂ 'ಹುಲಿ'ಗೆ ದಕ್ಕದ ಹುದ್ದೆ; ಶೋಭಾ ಕೈ ತಪ್ಪಿದ ಸ್ಥಾನ; ಮಾಜಿ ಸಚಿವ ಸೋಮಣ್ಣ ನೀರವ ಮೌನ!

ಬಿ.ವೈ.ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿದ್ದು ಆಕಾಂಕ್ಷಿಗಳಲ್ಲಿ ಅಸಮಾಧಾನ ಕಟ್ಟೆ ಒಡೆಯುವಂತೆ ಮಾಡಿದೆ. ಪಕ್ಷದ ಹಿರಿಯರು, ಅನುಭವಿಗಳೂ ಆದ ನಮಗೇ ಪಕ್ಷದ ಸಾರಥ್ಯ ಸಿಗುತ್ತದೆ ಎಂದುಕೊಂಡಿದ್ದವರು ಈಗ ಬೇಸರಗೊಂಡಿದ್ದಾರೆ.
ಸಿ.ಟಿ ರವಿ, ಶೋಭ ಕರಂದ್ಲಾಜೆ ಮತ್ತು ವಿ. ಸೋಮಣ್ಣ
ಸಿ.ಟಿ ರವಿ, ಶೋಭ ಕರಂದ್ಲಾಜೆ ಮತ್ತು ವಿ. ಸೋಮಣ್ಣ

ಬೆಂಗಳೂರು: ಬಿ.ವೈ.ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿದ್ದು ಆಕಾಂಕ್ಷಿಗಳಲ್ಲಿ ಅಸಮಾಧಾನ ಕಟ್ಟೆ ಒಡೆಯುವಂತೆ ಮಾಡಿದೆ. ಪಕ್ಷದ ಹಿರಿಯರು, ಅನುಭವಿಗಳೂ ಆದ ನಮಗೇ ಪಕ್ಷದ ಸಾರಥ್ಯ ಸಿಗುತ್ತದೆ ಎಂದುಕೊಂಡಿದ್ದವರು ಈಗ ಬೇಸರಗೊಂಡಿದ್ದಾರೆ.

ವಿಜಯೇಂದ್ರಗೆ ಪಕ್ಷದ ಸಾರಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸೋಮಣ್ಣ ನಿರಾಕರಿಸಿದ್ದು, ಮೌನವಾಗಿದ್ದರು. ವಿಜಯೇಂದ್ರ ಅಧ್ಯಕ್ಷ ಪಟ್ಟ ವಿಚಾರವನ್ನು ಸೋಮಣ್ಣ ಒಪ್ಪಿಕೊಳ್ಳುತ್ತಾರಾ ಅಥವಾ ಇಲ್ಲವಾ ಎಂಬುದು ಪ್ರಶ್ನೆಯಾಗಿದ್ದು, ಅವರ ನಡೆ ಕುತೂಹಲ ಮೂಡಿಸಿದೆ. ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದ್ದಾರೆ.

ವಿಜಯೇಂದ್ರ ನೇಮಕ ಕುರಿತು ಮಾಧ್ಯಮದವರು ಕೇಳಿದಾಗ ಸೋಮಣ್ಣ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಾನೇ ಸುದ್ದಿಗೋಷ್ಠಿ ಮಾಡುತ್ತೇನೆ ಎಂದಷ್ಟೇ ಹೇಳಿದವರು, ಮುಂದೆ ಒಂದು ಮಾತು ಕೂಡ ಆಡದೇ ಕಾರು ಹತ್ತಿ ಹೊರಟು ಹೋದರು.

ಈ ಹಿಂದೆಯೇ ಹೈಕಮಾಂಡ್ ಬಳಿ ಬಾಯಿ ಬಿಟ್ಟು ರಾಜ್ಯಾಧ್ಯಕ್ಷ ಸ್ಥಾನ ಕೊಡುವಂತೆ ಸೋಮಣ್ಣ ಕೇಳಿದ್ದರು. ತಮಗೆ ಸಾಮರ್ಥ್ಯ ಇದೆ. ನಿಮ್ಮ ಮಾತು ಕೇಳಿ ಎರಡು ಕಡೆ ಸ್ಪರ್ಧಿಸಿ ಸೋತೆ. ನಿಮ್ಮಿಂದಲೇ ನನ್ನ ರಾಜಕೀಯ ಬದುಕು ಅತಂತ್ರವಾಯ್ತು ಅಂತ ಸೂಕ್ಷ್ಮವಾಗಿ ವರಿಷ್ಠರಿಗೆ ತಿಳಿಸಿದ್ದರು. ಆದರೂ ಬಿಜೆಪಿ ವರಿಷ್ಠರೂ ಸೋಮಣ್ಣಗೆ ಮಣೆ ಹಾಕದಿರುವುದು ಸಹಜವಾಗಿಯೇ ಅಸಮಾಧಾನ ಮೂಡಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷರ ರೇಸ್‌ನಲ್ಲಿ ಪ್ರಮುಖವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಿ.ಟಿ. ರವಿ, ಬಸನಗೌಡ ಪಾಟೀಲ್ ಯತ್ನಾಳ್, ವಿ. ಸೋಮಣ್ಣ, ಆರ್. ಅಶೋಕ್, ಅಶ್ವತ್ಥ್ ನಾರಾಯಣ್ ಸೇರಿದಂತೆ ಹಲವರ ಹೆಸರು ಕೇಳಿ ಬಂದಿತ್ತು. ಆದರೀಗ ಅವರನ್ನೆಲ್ಲ ಹಿಂದಿಕ್ಕಿ ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ ಗೆದ್ದಿದ್ದಾರೆ.

ಮಾಜಿ ಸಚಿವ ಸಿ ಟಿ ರವಿ ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹೈಕಮಾಂಡ್ ಜೊತೆ ಒಳ್ಳೆಯ ಸಂಪರ್ಕ ಇರುವ ಸಿಟಿ ರವಿ ಹಲವು ರಾಜ್ಯಗಳ ಚುನಾವಣೆಗಳಲ್ಲೂ ಸಕ್ರಿಯರಾಗಿ ಭಾಗಿಯಾಗಿದ್ದರು. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನ ಸಿಗಬಹುದು ಅಂತ ಲೆಕ್ಕಾಚಾರ ಹಾಕಿದ್ದರು. ಇದೀಗ ಅವರ ಲೆಕ್ಕಾಚಾರ ಉಲ್ಟಾ ಆಗಿದೆ.

ಇನ್ನೇನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೇ ಬಿಜೆಪಿ ರಾಜ್ಯಾಧ್ಯಕ್ಷೆ ಆಗೇ ಬಿಡ್ತಾರೆ ಎಂಬ ಸುದ್ದಿ ದಟ್ಟವಾಗಿಯೇ ಹರಿದಾಡುತ್ತಿತ್ತು. ಮೈಸೂರು ದಸರಾ ವೇಳೆಯಲ್ಲಂತೂ ಅಮಿತ್ ಶಾ ಕಾಲ್ ಮಾಡಿದ್ದು, ರಾಜ್ಯಾಧ್ಯಕ್ಷೆ ಆಗುತ್ತಾರೆ ಅಂತ ವಿಶ್ ಮಾಡಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಆದರೆ ಇದೀಗ ಬಿಜೆಪಿ ರಾಜ್ಯಾಧ್ಯಕ್ಷೆ ಸ್ಥಾನ ಶೋಭಾ ಕರಂದ್ಲಾಜೆ ಕೈ ತಪ್ಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com