ಬೆಂಗಳೂರು: ನೂತನವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಮುಖ್ಯಮಂತ್ರಿ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ನಾಳೆ ಅಂದರೆ ನವೆಂಬರ್ 15ರಂದು ಅಧಿಕೃತವಾಗಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿ ಜಗನ್ನಾಥ ಭವನ ಸಿದ್ಧವಾಗಿದೆ.
ನಾಡಿದ್ದು ನವೆಂಬರ್ 16 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶನಕ್ಕೆ ಬಿಜೆಪಿ ಭರ್ಜರಿ ಸಿದ್ದತೆ ನಡೆಸಿತ್ತು. ಅಂದೇ ವಿಜಯೇಂದ್ರಗೆ ಪಟ್ಟಾಭಿಷೇಕಕ್ಕೆ ಮುಹೂರ್ತ ನಿಗದಿಯಾಗಿತ್ತು. ಆದರೆ, ಇದೀಗ ಕಾರ್ಯಕ್ರಮವನ್ನು ಬಿಜೆಪಿ ಮುಂದೂಡಿದ್ದು, ನವೆಂಬರ್ 23ರ ನಂತರ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ರಾಜ್ಯ ಬಿಜೆಪಿ, ಇದೀಗ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ರಾಜ್ಯ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ರಾಜ್ಯ ಬಿಜೆಪಿ ಹೊಸ ಯೋಜನ ರೂಪಿಸುತ್ತಿದೆ. ರಾಜ್ಯಾಧ್ಯಕ್ಷರ ನೇಮಕ ನಂತರ ಪಕ್ಷದ ಎಲ್ಲಾ ಸ್ತರದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಮುಂದುವರಿದು ಲೋಕಸಭೆ ಚುನಾವಣೆಯನ್ನು ಎದುರಿಸುವ ಯೋಜನೆ ಹಾಕಿಕೊಂಡಿರುವ ವಿಜಯೇಂದ್ರ ಅವರು ಮೊದಲಿಗೆ ಬೂತ್ ಮಟ್ಟದ ಅಧ್ಯಕ್ಷರನ್ನು ಭೇಟಿ ಮಾಡಿದ್ದರು.
ನಂತರ ಪಕ್ಷದ ಪ್ರಮುಖ ನಾಯಕರನ್ನು, ಜೆಡಿಎಸ್ ವರಿಷ್ಠ ದೇವೇಗೌಡರನ್ನು, ಕೆಲವು ಮಠಾಧೀಶರನ್ನು ಭೇಟಿ ಮಾಡಿ ಸಲಹೆ ಸೂಚನೆ ಪಡೆಯುವ ಮುನ್ಸೂಚನೆ ನೀಡಿದ್ದಾರೆ. ಈ ಮಧ್ಯೆ, ರಾಜ್ಯ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಸಿದ್ದತೆ ನಡೆಸಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಆಹ್ವಾನಿಸಿ ದೊಡ್ಡ ಸಮಾವೇಶ ನಡೆಸಲು ಬಿಜೆಪಿ ಪ್ಲಾನ್ ಮಾಡಿದೆ. ಈಗಾಗಲೇ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಬ್ಯುಸಿಯಾಗಿದ್ದು, ಈ ಸಂದರ್ಭದಲ್ಲಿ ಹೈಕಮಾಂಡ್ ನಾಯಕರನ್ನ ಆಹ್ವಾನಿಸಿದರೆ ಬರುವುದಿಲ್ಲವೆಂದು ನವೆಂಬರ್ 16 ರ ಸಮಾವೇಶವನ್ನು ಮುಂದೂಡಿದ್ದು, ನವೆಂಬರ್ 23ರ ನಂತರ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.
ಇನ್ನೂ ಈ ಕುರಿತು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ನವೆಂಬರ್ 23ರ ನಂತರ ನವೆಂಬರ್ 30 ರೊಳಗೆ ದೊಡ್ಡ ಸಾರ್ವಜನಿಕ ಸಭೆ ನಡೆಸುತ್ತೇವೆ. ನವೆಂಬರ್ 23ಕ್ಕೆ ತೆಲಂಗಾಣ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಚುನಾವಣೆ ಮುಗಿಯುತ್ತದೆ. ಹೀಗಾಗಿ ವರಿಷ್ಠರಾದ ಅಮಿತ್ ಶಾ ಅಥವಾ ಜೆ.ಪಿ.ನಡ್ಡಾಗೆ ಆಹ್ವಾನ ನೀಡುತ್ತೇವೆ ಎಂದು ಹೇಳಿದ್ದಾರೆ.
ಪದಗ್ರಹಣ ಕಾರ್ಯಕ್ರಮಕ್ಕೆ ನಾನು ಹೋಗಲ್ಲ: ವಿಜಯೇಂದ್ರ ಪದಗ್ರಹಣ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಸಿ.ಟಿ. ರವಿ, ವಿಜಯೇಂದ್ರ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ನಾನು ಹೋಗಲ್ಲ. ಅವರು ನನ್ನ ಜತೆ 2 ಬಾರಿ ಫೋನ್‌ನಲ್ಲಿ ಮಾತನಾಡಿದ್ದಾರೆ. ನವೆಂಬರ್ 15ನೇ ತಾರೀಖು ಜವಾಬ್ದಾರಿ ಸ್ವೀಕಾರ ಮಾಡುತ್ತಿದ್ದಾರೆ. ಆದರೆ, ಅವತ್ತು ರಾತ್ರಿವರೆಗೂ ನನಗೆ ಮಧ್ಯಪ್ರದೇಶದಲ್ಲಿ ಚುನಾವಣಾ ಕ್ಯಾಂಪೇನ್ ಇದೆ. ಹಾಗಾಗಿ ನಾನು ಆ ದಿನ ಇರುವುದಿಲ್ಲ ಎಂದು ಹೇಳಿರುವುದಾಗಿ ಸ್ಪಷ್ಟಪಡಿಸಿದರು.
ನಾವು ಪಕ್ಷದ ಲಕ್ಷ್ಮಣ ರೇಖೆಯನ್ನು ಯಾವತ್ತು ದಾಟಿದ್ದೇವೆ? 20 ವರ್ಷ ಶಾಸಕ, 35 ವರ್ಷ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಜಗಳ ಆಡಿದ್ದರೂ ನಮ್ಮ ಮನೆ ಒಳಗೆ ಜಗಳ ಆಡಿದ್ದೇನೆ. ಹೊಸ್ತಿಲು ದಾಟಿ ಬೇರೆಯವರ ಮನೆಗೆ ಹೋಗಿ ಕುಳಿತು ನಮ್ಮ ಮನೆ ಸಮಸ್ಯೆ ಬಗೆಹರಿಸಿ ಅಂತ ಕೇಳಿಲ್ಲ. ಜಗಳ ಆಡಿ ಬಗೆಹರಿಸಿ ಅಂದರೆ ನಮ್ಮ ಮನೆಯಲ್ಲೇ ಮಾಡೋದು ಎಂದು ಹೇಳಿದರು.
ಬಿಜೆಪಿ ಅಧ್ಯಕ್ಷ ಪಟ್ಟ ಅನ್ನೋದು ಒಂದು ಸ್ಥಾನವಾಗಿದೆ. ಅದಕ್ಕೆ ಕೊಡುವ ಸ್ಥಾನ-ಮಾನವನ್ನು ಕೊಟ್ಟೇ ಕೊಡುತ್ತೇವೆ. ನ್ಯಾಯಪೀಠ ಬದಲಾಗಲ್ಲ, ನ್ಯಾಯಾಧೀಶರು ಬದಲಾಗುತ್ತಾರೆ. ಪೀಠ ಹಾಗೆಯೇ ಇರುತ್ತದೆ. ಆ ಪೀಠಕ್ಕೆ ಕೊಡುವ ಗೌರವವನ್ನು ಕೊಟ್ಟೇ ಕೊಡುತ್ತೇವೆ. ನಮ್ಮ ಗುರಿ ಒಂದೇ, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಸಿ.ಟಿ. ರವಿ ಸ್ಪಷ್ಟಪಡಿಸಿದರು.
Advertisement