ಜಾತಿ ರಾಜಕೀಯ: ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಹಿಂದುಳಿದ ವರ್ಗದ ನಾಯಕನಿಗೆ ಮಣೆ ಹಾಕುತ್ತದೆಯೇ ಬಿಜೆಪಿ ಹೈಕಮಾಂಡ್?

ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಬಿಜೆಪಿ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪುತ್ರ ಶಿಕಾರಿಪುರ ಕ್ಷೇತ್ರದ ಶಾಸಕ ಬಿ ವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿದ ನಂತರ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಯಾರನ್ನು ಹೈಕಮಾಂಡ್ ಆಯ್ಕೆ ಮಾಡುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಬಿಜೆಪಿ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪುತ್ರ ಶಿಕಾರಿಪುರ ಕ್ಷೇತ್ರದ ಶಾಸಕ ಬಿ ವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿದ ನಂತರ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಯಾರನ್ನು ಹೈಕಮಾಂಡ್ ಆಯ್ಕೆ ಮಾಡುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಹಿಂದುಳಿದ ವರ್ಗದ ಅಥವಾ ಒಕ್ಕಲಿಗ ಸಮುದಾಯದ ನಾಯಕನನ್ನು ಆರಿಸಬಹುದು ಎಂಬ ವದಂತಿ ದಟ್ಟವಾಗಿ ಕೇಳಿಬರುತ್ತಿದೆ. ಪಕ್ಷದ ತತ್ವ ಸಿದ್ಧಾಂತಗಳ ಮೇಲೆ ಬದ್ಧತೆ ತೋರಿಸುವವರು ಮತ್ತು ಆರ್ ಎಸ್ ಎಸ್ ಹಿನ್ನಲೆ ಹೊಂದಿರುವವರನ್ನು ಬಿಜೆಪಿ ಹೈಕಮಾಂಡ್ ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಇದೇ ಶುಕ್ರವಾರ ನವೆಂಬರ್ 17ರಂದು ಬಿಜೆಪಿ ಶಾಸಕಾಂಗ ಪಕ್ಷ ಸಭೆ ನಡೆಯಲಿದೆ. ಅದರಲ್ಲಿ ಕೇಂದ್ರ ವೀಕ್ಷಕರು ಭಾಗವಹಿಸಲಿದ್ದಾರೆ. ಎಲ್ಲಾ 66 ಶಾಸಕರ ಸಾಮೂಹಿಕ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಬಾರಿ ಒಕ್ಕಲಿಗ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡ ನಂತರ ಒಕ್ಕಲಿಗ ಸಮುದಾಯದ ನಾಯಕನನ್ನು ವಿರೋಧ ಪಕ್ಷದ ನಾಯಕನಾಗಿ ಬಿಜೆಪಿ ಆಯ್ಕೆ ಮಾಡುವ ಸಾಧ್ಯತೆ ಕಡಿಮೆಯಿದೆ.

ಮೊನ್ನೆ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಮಾಜಿ ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ, ತಾವು ಕೂಡ ವಿರೋಧ ಪಕ್ಷದ ನಾಯಕ ಸ್ಥಾನದ ಆಕಾಂಕ್ಷಿ ಎಂದಿದ್ದರು.ಹಿರಿಯ ನಾಯಕ ಆರ್ ಅಶೋಕ್ ಅವರ ಹೆಸರು ಹರಿದಾಡುತ್ತಿದೆ. ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಹೆಸರು ಕೂಡ ಮುಂಚೂಣಿಯಲ್ಲಿದೆ. ಸುನಿಲ್ ಕುಮಾರ್ ಅವರು ಹಿಂದುಳಿದ ಸಮುದಾಯದ ಬಿಲ್ಲವ ನಾಯಕ. ನಾಲ್ಕು ಬಾರಿ ಶಾಸಕರಾಗಿದ್ದಾರೆ. ಬಿಲ್ಲವ ಅಥವಾ ಈಡಿಗರು ಕುರುಬ ಸಮುದಾಯದ ನಂತರ ರಾಜ್ಯದಲ್ಲಿ ಪ್ರಬಲ ಹಿಂದುಳಿದ ಸಮುದಾಯದವರಾಗಿದ್ದಾರೆ ಅದರಲ್ಲೂ ವಿಶೇಷವಾಗಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಈಡಿಗ ಸಮುದಾಯದ ಪ್ರಭಾವ ಹೆಚ್ಚು. ಸಿಎಂ ಸಿದ್ದರಾಮಯ್ಯನವರು ಕುರುಬ ಸಮುದಾಯಕ್ಕೆ ಸೇರಿದವರು. ಅವರ ಎದುರಿಗೆ ಪ್ರಬಲ ಹಿಂದುಳಿದ ಸಮುದಾಯ ಮುಖಂಡರಿಗೆ ಈ ಬಾರಿ ವಿರೋಧ ಪಕ್ಷದ ಸ್ಥಾನಕ್ಕೆ ಬಿಜೆಪಿ ಮಣೆ ಹಾಕುವ ಸಾಧ್ಯತೆಯಿದೆ.

ಬಿಲ್ಲವ ಸಮುದಾಯ ಮತಗಳನ್ನು ಸೆಳೆಯಲು ಬಿಜೆಪಿ ಸುನಿಲ್ ಕುಮಾರ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ. ಈ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಒಂದು ವಿಭಾಗದ ಬಿಲ್ಲವ ಸಮುದಾಯದ ಮತಗಳು ಬಿಜೆಪಿ ಕೈತಪ್ಪಿಹೋಗಿದ್ದವು ಎನ್ನುತ್ತಾರೆ ರಾಜಕೀಯ ಪಂಡಿತರು. 

ವಿರೋಧ ಪಕ್ಷದ ನಾಯಕ ಎಂದರೆ ಕಾವಲು ನಾಯಿ ಇದ್ದಂತೆ. ಆ ಹುದ್ದೆಗೆ ಸಮರ್ಥ ಅಭ್ಯರ್ಥಿಯನ್ನು ನೇಮಿಸುವುದು ಪಕ್ಷದ ತಾಕತ್ತು ತೋರಿಸುತ್ತದೆ. ಜಾತಿ ಆಧಾರದ ಮೇಲೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿದರೆ ಅದು ತಾತ್ಕಾಲಿಕವಾಗಿ ಮಾತ್ರ ಸಹಾಯವಾಗಬಹುದು ಎನ್ನುತ್ತಾರೆ ಸಿ ಟಿ ರವಿ. ಹೈಕಮಾಂಡ್ ಈಗಾಗಲೇ ವಿರೋಧ ಪಕ್ಷ ನಾಯಕನ ನೇಮಕ ಬಗ್ಗೆ ಯಡಿಯೂರಪ್ಪನವರಲ್ಲಿ ಚರ್ಚೆ ನಡೆಸಿದ್ದು ಅವರ ತಂತ್ರದ ಆಧಾರದ ಮೇಲೆ ನಿಂತಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com