ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಧಿಕಾರ ಸ್ವೀಕಾರ: ಯಡಿಯೂರಪ್ಪ ಬಣದಲ್ಲಿ ಸಂತಸ, ಕೆಲವು ನಾಯಕರು ಗೈರು

ಬಿಜೆಪಿಯ ಶಕ್ತಿ ಕೇಂದ್ರ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಜಗನ್ನಾಥ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪುತ್ರ ಶಿಕಾರಿಪುರ ಕ್ಷೇತ್ರದ ಶಾಸಕ, ಯುವ ನಾಯಕ ಬಿ ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಬಿ ವೈ ವಿಜಯೇಂದ್ರಗೆ ಅಧಿಕಾರ ಹಸ್ತಾಂತರ
ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಬಿ ವೈ ವಿಜಯೇಂದ್ರಗೆ ಅಧಿಕಾರ ಹಸ್ತಾಂತರ

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ರಾಜ್ಯ ಬಿಜೆಪಿಯಲ್ಲಿ ಈಗ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿಯ ಶಕ್ತಿ ಕೇಂದ್ರ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಜಗನ್ನಾಥ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪುತ್ರ ಶಿಕಾರಿಪುರ ಕ್ಷೇತ್ರದ ಶಾಸಕ, ಯುವ ನಾಯಕ ಬಿ ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ. 

ರಾಜ್ಯ ಬಿಜೆಪಿಯ ಹಿರಿಯ ನಾಯಕರು, ಸಂಸದರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿಜಯೇಂದ್ರ ಅವರಿಗೆ ಕೇಸರಿ ಶಾಲು ತೊಡಿಸಿ ಸನ್ಮಾನಿಸಿ ಅಧಿಕಾರ ಹಸ್ತಾಂತರ ಮಾಡಿದರು.

ಇದಕ್ಕೂ ಮುನ್ನ ವಿಜಯೇಂದ್ರ ಅವರು ತಂದೆ ಯಡಿಯೂರಪ್ಪನವರ ಕಾಲಿಗೆ ನಮಸ್ಕರಿಸಿ ಬಿಜೆಪಿ ಕಚೇರಿಯಲ್ಲಿ ಹೋಮ,ಹವನ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಕೆ ಎಸ್ ಈಶ್ವರಪ್ಪ, ಆರ್ ಅಶೋಕ್, ಬಸವರಾಜ ಬೊಮ್ಮಾಯಿ, ವಿ ಗೋಪಾಲಯ್ಯ, ಆದರ ಜ್ಞಾನೇಂದ್ರ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಯಡಿಯೂರಪ್ಪ ಬಣದವರಿಗೆ ಇಂದು ಹಬ್ಬದ ಸಂಭ್ರಮವಿದೆ.

ಪಕ್ಷ ಸಂಘಟನೆಗಾಗಿ ನಾವೆಲ್ಲ ವಿಜಯೇಂದ್ರ ಜತೆ ಇರುತ್ತೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಎಸ್​.ಆರ್.ವಿಶ್ವನಾಥ್​ ತಿಳಿಸಿದರು. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನೂ ಗೆಲ್ಲಲು ಸಿದ್ಧತೆ ನಡೆದಿದೆ. ಈಗಾಗಲೇ ಬಿ.ವೈ.ವಿಜಯೇಂದ್ರ ಪ್ರವಾಸ ಶುರು ಮಾಡಿದ್ದಾರೆ. ನಾವೆಲ್ಲ ಉತ್ಸಾಹದಿಂದ ಅವರ ಜತೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದರು.

ಸೋದರಿ ಅರುಣಾದೇವಿ ಸಂತಸ: ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವುದು ಖುಷಿ ತಂದಿದೆ ಎಂದು ಬೆಂಗಳೂರಿನಲ್ಲಿ ಬಿ.ವೈ.ವಿಜಯೇಂದ್ರ ಸಹೋದರಿ ಅರುಣಾದೇವಿ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ತಂದೆ ಆ ಕಾಲದಲ್ಲೇ ಪಕ್ಷ ಸಂಘಟನೆಗಾಗಿ ಹೋರಾಟ ಮಾಡಿದ್ರು. ಈಗ ಬಿ.ವೈ.ವಿಜಯೇಂದ್ರಗೆ ಪಕ್ಷದ ನಾಯಕರು ಜವಾಬ್ದಾರಿ ನೀಡಿದ್ದಾರೆ. ರಾಜ್ಯದ ಜನರು ಬಿ.ವೈ.ವಿಜಯೇಂದ್ರ ಜೊತೆ ಇದ್ದಾರೆ. ವಿಜಯೇಂದ್ರ ಅಧಿಕಾರ ಸ್ವೀಕರಿಸ್ತಿರೋದು ಕುಂಟುಂಬದ ಸಂಭ್ರಮವಲ್ಲ. ಒಂದು‌ ಸಮಾಜದ ಸಂಭ್ರಮ, ಪ್ರತಿಯೊಬ್ಬ ಕಾರ್ಯಕರ್ತರ ಸಂಭ್ರಮ ಎಂದರು.

ಕೆಲವರು ಗೈರು: ಬಿಜೆಪಿಯಲ್ಲಿ ಪ್ರಮುಖ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಅಸಮಾಧಾನಿತರು ಎಂದು ಗುರುತಿಸಿಕೊಂಡಿರುವ ವಿ ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಮಧ್ಯ ಪ್ರದೇಶ ಚುನಾವಣೆ ಪ್ರಚಾರದಲ್ಲಿರುವ ಸಿ ಟಿ ರವಿಯವರು ಅಲ್ಲಿಂದಲೇ ವಿಜಯೇಂದ್ರ ಅವರಿಗೆ ಶುಭಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com