ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅಧಿಕಾರ ಸ್ವೀಕಾರ: ಬಿಜೆಪಿಯ ಹಿರಿ ನಾಯಕರು ಕೊಟ್ಟ ಸಲಹೆ, ಸೂಚನೆ ಏನು?

ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಸಾರಥಿಯ ನೇಮಕವಾಗಿದೆ. ನೂತನ ರಾಜ್ಯಾಧ್ಯಕ್ಷರಾಗಿ (BJP State President) ಬಿ.ವೈ. ವಿಜಯೇಂದ್ರ (BY Vijayendra) ಅವರು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.
ನಳಿನ್ ಕುಮಾರ್ ಕಟೀಲು ಅವರಿಂದ ಅಧಿಕಾರ ಸ್ವೀಕರಿಸಿಕೊಂಡ ಬಿ ವೈ ವಿಜಯೇಂದ್ರ
ನಳಿನ್ ಕುಮಾರ್ ಕಟೀಲು ಅವರಿಂದ ಅಧಿಕಾರ ಸ್ವೀಕರಿಸಿಕೊಂಡ ಬಿ ವೈ ವಿಜಯೇಂದ್ರ

ಬೆಂಗಳೂರು: ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಸಾರಥಿಯ ನೇಮಕವಾಗಿದೆ. ನೂತನ ರಾಜ್ಯಾಧ್ಯಕ್ಷರಾಗಿ (BJP State President) ಬಿ.ವೈ. ವಿಜಯೇಂದ್ರ (BY Vijayendra) ಅವರು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ಇಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ ಎಸ್ ಯಡಿಯೂರಪ್ಪ ಬಣದ ನಾಯಕರು ಸೇರಿದಂತೆ ಹಿರಿಯ ನಾಯಕರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. 

ಅರವಿಂದ ಬೆಲ್ಲದ, ವಿ ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜಯೇಂದ್ರ ಪದಗ್ರಹಣದ ನಂತರ ಒಗ್ಗಟ್ಟಿನ ಮಂತ್ರವನ್ನು ಜಪಿಸಿ ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳ ಪೈಕಿ ಅತಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದನ್ನು ನೋಡೋಣ ಎಂದು ಪುನರುಚ್ಛರಿಸಿದರು.

<strong>ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತಂದೆ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಶೀರ್ವಾದ ಪಡೆದ ಬಿ ವೈ ವಿಜಯೇಂದ್ರ </strong>
ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತಂದೆ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಶೀರ್ವಾದ ಪಡೆದ ಬಿ ವೈ ವಿಜಯೇಂದ್ರ 

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.‌ ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂಗಳಾದ ಕೆ.ಎಸ್.‌ ಈಶ್ವರಪ್ಪ, ಗೋವಿಂದ ಕಾರಜೋಳ, ನಿಕಟಪೂರ್ವ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಎಲ್ಲರೂ ವಿಜಯೇಂದ್ರ ಅವರಿಗೆ ಶುಭಕಾಮನೆಗಳನ್ನು ತಿಳಿಸಿ ನಿಮ್ಮ ಜೊತೆ ನಾವಿದ್ದೇವೆ ಎಂದು ಸಂದೇಶ ನೀಡಿದರು. 

ಬಿಜೆಪಿ ಬೃಹತ್‌ ಸಮಾವೇಶಕ್ಕೆ ಅಮಿತ್‌ ಶಾ: ಬಿ.ಎಸ್.‌ ಯಡಿಯೂರಪ್ಪ: ಈ ವೇಳೆ ಮಾತನಾಡಿದ ವಿಜಯೇಂದ್ರ ಅವರ ತಂದೆ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಆಶೀರ್ವಾದದಿಂದ ಬಿ.ವೈ. ವಿಜಯೇಂದ್ರ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಮಿತ್ ಶಾ ಅವರನ್ನು ಬೆಂಗಳೂರಿಗೆ ಕರೆಸಿ ಒಂದು ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ಮಾಡಲು ಯೋಚನೆ ಮಾಡಲಾಗುತ್ತಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಅದ್ಧೂರಿ ಸ್ವಾಗತ ಸಿಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಜಯೇಂದ್ರರಿಗೆ ಎಲ್ಲರೂ ಸಹಕಾರ ನೀಡಿ: ನಿಕಟಪೂರ್ವ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಬಳಿಕ ನಾಲ್ಕು ವರ್ಷಗಳ ಕಾಲ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ.‌ ಕೋವಿಡ್ ಸಮಯದಲ್ಲೂ ಯಶಸ್ವಿಯಾಗಿ ಪಕ್ಷ ಸಂಘಟನೆ ಮಾಡಿದ್ದೇವೆ. ಅತಿಹೆಚ್ಚು ಮೋರ್ಚಾಗಳನ್ನು ಮಾಡಿದ ಕೆಲಸ ನಮ್ಮದು. ನನಗೆ ಸಂಪೂರ್ಣ ಸಹಕಾರ ನೀಡಿದ್ದೀರಿ. ಅದೇ ರೀತಿಯ ಸಹಕಾರವನ್ನು ಇನ್ನು ಮುಂದೆ ವಿಜಯೇಂದ್ರ ಅವರಿಗೆ ಎಲ್ಲರೂ ಕೊಡೋಣ. ವಿಜಯೇಂದ್ರ ಅವರು ಮೊದಲಿನಿಂದಲೂ ಒಬ್ಬ ಉತ್ತಮ ಕಾರ್ಯಕರ್ತರಾಗಿದ್ದಾರೆ. ನನ್ನ ನೇತೃತ್ವದಲ್ಲಿ ಪಕ್ಷ ಮುನ್ನಡೆಯುತ್ತಿದ್ದಾಗ ಅವರು ಉಪಾಧ್ಯಕ್ಷರಾಗಿದ್ದರು. ಆಗಲೂ ಸಹ ಅವರು ಎಲ್ಲ ಕಾರ್ಯಚಟುವಟಿಕೆಯಲ್ಲಿ ಭಾಗಿಯಾಗಿ ನನಗೆ ಶಕ್ತಿ ತುಂಬುತ್ತಿದ್ದರು. ಬಿ.ಎಸ್.‌ ಯಡಿಯೂರಪ್ಪ ಅವರ ಪ್ರೇರಣೆ ಮತ್ತು ಜೆ.ಪಿ. ನಡ್ಡಾ, ಅಮಿತ್ ಶಾ, ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ನೇತೃತ್ವದಲ್ಲಿ ಪಕ್ಷವನ್ನು ಸಂಘಟನೆ ಮಾಡಿದ್ದೇವೆ ಎಂದು ಹೇಳಿದರು.

<strong>ಮಗನಿಗೆ ತಂದೆ ಬಿಎಸ್ ವೈ ಆಶೀರ್ವಾದ, ಶುಭಹಾರೈಕೆ</strong>
ಮಗನಿಗೆ ತಂದೆ ಬಿಎಸ್ ವೈ ಆಶೀರ್ವಾದ, ಶುಭಹಾರೈಕೆ

ಉಗುಳುವುದಕ್ಕಿಂತಲೂ ನುಂಗುವುದನ್ನು ಕಲಿಯಬೇಕು: ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಮಾತನಾಡಿ, ನಾವು ಎಲ್ಲಿ ಕಳೆದುಕೊಂಡಿದ್ದೇವೋ ಅಲ್ಲಿಯೇ ಅದನ್ನು ಪಡೆದುಕೊಳ್ಳಬೇಕು. 2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಸ್ಥಾನ ಗೆಲ್ಲಬೇಕು. ಅಷ್ಟು ಶಕ್ತಿ ಅವರಿಗೆ ಸಿಗಲಿ. ಬಿ.ಎಸ್.‌ ಯಡಿಯೂರಪ್ಪ ರಕ್ತ ಅವರಿಗೆ ಹರಿದು ಬಂದಿದೆ. ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನವನ್ನು ಗೆದ್ದು ಡಬಲ್ ಪಡೆದುಕೊಳ್ಳಬೇಕು. ರಾಜ್ಯಾಧ್ಯಕ್ಷರಾಗಿರುವಾಗ ಉಗುಳುವುದಕ್ಕಿಂತಲೂ ನುಂಗುವುದನ್ನು ಕಲಿಯಬೇಕು ಎಂದು ಹೇಳಿದರು.

ವಿಜಯೇಂದ್ರಗೆ ಸಂಪೂರ್ಣ ಸಹಕಾರ ಬೇಕು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸೂಕ್ತ ಸಮಯದಲ್ಲಿ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ವಿಜಯೇಂದ್ರಗೆ ಸಂಪೂರ್ಣ ಸಹಕಾರ ಸಿಗಬೇಕು. ಪಕ್ಷಕ್ಕೆ ಈಗ ಉತ್ಸಾಹ ಮತ್ತು ಹುಮ್ಮಸ್ಸು ಬಂದಿದೆ. ವಿಜಯೇಂದ್ರ ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುತ್ತಾರೆ. ಕ್ರಿಕೆಟ್ ಇಂಡಿಯಾ ಟೀಮ್ ರೀತಿಯಲ್ಲಿ ಮುನ್ನಡೆಸಿ 28 ಸ್ಥಾನ ಗೆಲ್ಲಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.

ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡೋಣ: ಮಾಜಿ ಡಿಸಿಎಂ ಕೆ.ಎಸ್.‌ ಈಶ್ವರಪ್ಪ ಮಾತನಾಡಿ, ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇರೋದು ನಿಜ. ಅದನ್ನು ಅರಗಿಸಿಕೊಳ್ಳುವುದು ನಮಗೆ ಮೊದಲಿಂದಲೂ ವರಿಷ್ಠರು ಹೇಳಿಕೊಟ್ಟಿದ್ದಾರೆ. ಎಲ್ಲರೂ ಪಕ್ಷಕ್ಕಾಗಿ ದುಡಿಯೋಣ. ನಮ್ಮ ಗುರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದು ಎಂಬುದು ನೆನಪಿರಲಿ ಎಂದು ಹೇಳಿದರು.

<strong>ವಿಜಯೇಂದ್ರಗೆ ಶುಭಾಶಯ ಕೋರಿದ ಕೆ ಎಸ್ ಈಶ್ವರಪ್ಪ </strong>
ವಿಜಯೇಂದ್ರಗೆ ಶುಭಾಶಯ ಕೋರಿದ ಕೆ ಎಸ್ ಈಶ್ವರಪ್ಪ 

ತಪ್ಪುಗಳನ್ನು ತಿದ್ದಿ ನಡೆಯೋಣ: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಬಿ.ವೈ. ವಿಜಯೇಂದ್ರ ಯುವಕರಿದ್ದಾರೆ. ಪಕ್ಷ ಸಂಘಟನೆ ಮಾಡಲು ಮುಂದಾಗಿದ್ದಾರೆ. ಅವರ ಜತೆ ಇರೋಣ. ಮಾರ್ಗದರ್ಶನ ಮಾಡೋಣ. 28 ಸ್ಥಾನ ಗೆದ್ದು ತೋರಿಸೋಣ. ವಿಧಾನಸಭಾ ಚುನಾವಣೆಯಲ್ಲಿ ಸೋಲಾಗಿರುವುದು ನಮ್ಮ ರಾಜಕೀಯ ತಪ್ಪುಗಳಿಂದ. ಅದನ್ನು ಸರಿಪಡಿಸಿಕೊಂಡು ಮುಂದೆ ಹೋಗಬೇಕಾಗಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com