ಅಧಿಕಾರದ ಗರ್ವದಿಂದ ಸಚಿವರು ಮೆರೆಯುತ್ತಿದ್ದಾರೆ, ಮುಂದೆ ಈ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಆಗಬೇಕು: ಬಿ ವೈ ವಿಜಯೇಂದ್ರ

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಇಂದು ಬುಧವಾರ ಅಧಿಕಾರ ಸ್ವೀಕರಿಸಿದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಬಿ ವೈ ವಿಜಯೇಂದ್ರ ಅವರು ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು, ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು
ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಬಿ ವೈ ವಿಜಯೇಂದ್ರ ಅವರು ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು, ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು
Updated on

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಇಂದು ಬುಧವಾರ ಅಧಿಕಾರ ಸ್ವೀಕರಿಸಿದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ಸರ್ಕಾರ ಯಾವುದೇ ಕ್ರಮವಿಲ್ಲ. ಬರಪೀಡಿತ ಜಿಲ್ಲೆಗಳಿಗೆ ಈವರೆಗೂ ಯಾವುದೇ ಸಚಿವರು ಭೇಟಿ ನೀಡಿಲ್ಲ, ಆರಂಭದಲ್ಲಿ ಇದ್ದ ಉತ್ಸಾಹ ಸರ್ಕಾರದ ಸಚಿವರುಗಳಿಗೆ ಕೇವಲ ಆರು ತಿಂಗಳಲ್ಲಿ ಕುಗ್ಗಿ ಹೋಗಿದೆ. ಕೇವಲ ಆರು ತಿಂಗಳಲ್ಲಿ ಈ ಸರ್ಕಾರದ ಜನಪ್ರಿಯತೆ ಕುಗ್ಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಅಧಿಕಾರದ ಅಹಂ, ಗರ್ವದಿಂದ ಸಚಿವರು ಮೆರೆಯುತ್ತಿದ್ದಾರೆ. ಮುಂದೆ ಈ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಆಗಬೇಕು ಎಂದರು.ಈ ಸರ್ಕಾರ ಶಾಸಕರ ಕ್ಷೇತ್ರಗಳಿಗೆ 1 ರೂಪಾಯಿಕೂಡ ಅನುದಾನ ನೀಡುತ್ತಿಲ್ಲ. ಈ ವಿಚಾರವನ್ನು ಅವರದ್ದೇ ಪಕ್ಷದ ಶಾಸಕರೇ ಬಹಿರಂಗಪಡಿಸಿದ್ದಾರೆ. ಭ್ರಷ್ಟ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಅಧಿಕಾರ ಸ್ವೀಕಾರ ಮಾಡಿದ ಬಳಿಕ ಬಿ.ವೈ.ವಿಜಯೇಂದ್ರ ಹೇಳಿದರು.

ನನ್ನನ್ನು ಅಧ್ಯಕ್ಷರಾಗಿ ನೇಮಿಸಿರುವ ರಾಷ್ಟ್ರೀಯ ವರಿಷ್ಠರಿಗೆ ಧನ್ಯವಾದಗಳು. ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ​, ಜೆ.ಪಿ.ನಡ್ಡಾರಿಗೆ ಧನ್ಯವಾದ. ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷವು ಅಧ್ಯಕ್ಷರಾಗಿ ನೇಮಕ ಮಾಡಿದೆ. ಪಕ್ಷದ ಎಲ್ಲಾ ನಾಯಕರ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸವಿದೆ. ನನಗೆ ನೀಡಿರುವ ಸ್ಥಾನದ ಬಗ್ಗೆ ಅರಿವು ಇದೆ, ಜವಾಬ್ದಾರಿ ಹೆಚ್ಚಿದೆ. ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಕಾರ್ಯಕರ್ತರು ತಲೆತಗ್ಗಿಸುವ ಕೆಲಸ ಮಾಡದಂತೆ ಪಕ್ಷ ಸಂಘಟನೆ ಮಾಡುವೆ ಎಂದರು. 

ಕಾರ್ಯಕರ್ತರು ತಲೆ ತಗ್ಗಿಸುವ ಕೆಲಸ ಮಾಡಲ್ಲ, ಬೆಂಬಲವಾಗಿ ನಿಲ್ಲುತ್ತೇನೆ: ರಾಜ್ಯದಲ್ಲಿ ಸಾಕಷ್ಟು ಹಿರಿಯರು ಪಕ್ಷದಲ್ಲಿದ್ದಾರೆ. ಅವರನ್ನು ಬಿಟ್ಟು ನನಗೆ ಅವಕಾಶ ಕೊಟ್ಟಿದ್ದಾರೆ ಎಂದರೆ ಆ ಸ್ಥಾನದ ಮಹತ್ವ ನನಗೆ ಖಂಡಿತವಾಗಿಯೂ ಗೊತ್ತಿದೆ. ಪಕ್ಷದ ಹಿರಿಯರ ಮಾರ್ಗದರ್ಶನ ಪಡೆದು ಪಕ್ಷವನ್ನು ಸಂಘಟನೆ ಮಾಡುತ್ತೇನೆ. ಈ ವೇದಿಕೆಯ ಮೂಲಕ ಒಂದು ಭರವಸೆಯನ್ನು ಕೊಡುತ್ತೇನೆ. ಹಿರಿಯ ನಾಯಕರು ಮತ್ತು ಕಾರ್ಯಕರ್ತರು ತಲೆ ತಗ್ಗಿಸುವ ರೀತಿ ನಡೆದುಕೊಳ್ಳುವುದಿಲ್ಲ. ಅವರಿಗೆ ಎಲ್ಲ ಪರಿಸ್ಥಿತಿಗಳಲ್ಲೂ ಬೆಂಬಲವಾಗಿ ನಿಲ್ಲುತ್ತೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಆಪರೇಷನ್‌ ಕಮಲ ಮಾಡಲ್ಲ: ರಾಜ್ಯದಲ್ಲಿ ಹೊಸ ಸರಕಾರ ಬಂದಿದೆ. ನಮ್ಮನ್ನು ಶೇಕಡಾ 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಟೀಕಿಸಿದ್ದರು. ಮತದಾರರೂ ಅದನ್ನು ನಂಬಿದರು. ಹೊಸ ಕಾಂಗ್ರೆಸ್ ಸರಕಾರ ಬಂದು 6 ತಿಂಗಳಾಗಿದೆ. ಹಗಲುದರೋಡೆ, ಭ್ರಷ್ಟಾಚಾರ ಮೇರೆ ಮೀರಿದೆ. ಶೇ 40ರಷ್ಟು ಕಮಿಷನ್, ಭ್ರಷ್ಟಾಚಾರದ ಅನುಷ್ಠಾನ ಕಾಂಗ್ರೆಸ್ ಸರಕಾರದಿಂದ ಆಗುತ್ತಿದೆ ಎಂದು ವಿಜಯೇಂದ್ರ ಗೇಲಿ ಮಾಡಿದರು.

ನಾವೇನೂ ಆಪರೇಷನ್ ಕಮಲ ಮಾಡುವುದಿಲ್ಲ. ಆಡಳಿತ ಪಕ್ಷದ ಶಾಸಕರೇ ರಸ್ತೆಯಲ್ಲಿ ಓಡಾಡದಂತಾಗಿದೆ. ಒಂದು ರೂಪಾಯಿ ಅನುದಾನ ಸಿಗುತ್ತಿಲ್ಲ. ಈ ದುಷ್ಟ ಸರಕಾರಕ್ಕೆ ಆ ಪಕ್ಷದ ಶಾಸಕರೇ ಪಾಠ ಕಲಿಸುತ್ತಾರೆ ಎಂದು ಟೀಕಿಸಿದರು. 

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯೂ ಗೆಲ್ಲೋಣ: ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನೂ ಮರೆಯದಿರೋಣ ಎಂದು ಕಿವಿಮಾತು ಹೇಳಿದ ಅವರು, ಅವನ್ನೂ ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು. ಚುನಾವಣೆ ಗೆದ್ದ ಬಳಿಕ ನಾನು ಯಾವುದೇ ಸಮುದಾಯಕ್ಕೆ ಸೇರಿದವನಲ್ಲ. 28ಕ್ಕೆ 28 ಕ್ಷೇತ್ರ ಗೆಲ್ಲುವ ಜೊತೆಜೊತೆಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೂಡ ರಾಜ್ಯವನ್ನು ಬಿಜೆಪಿ ಭದ್ರಕೋಟೆಯಾಗಿ ಮಾಡಲು ಶ್ರಮಿಸುತ್ತೇನೆ ಎಂದು ವಿಜಯೇಂದ್ರ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com