ಕುಮಾರಸ್ವಾಮಿ ಹತಾಶೆಯಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತನೆ: ಕಾಂಗ್ರೆಸ್ ಟೀಕೆ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಡುವಿನ ಆರೋಪ, ಪ್ರತ್ಯಾರೋಪ, ಟ್ವೀಟ್ ಸಮರ ಮುಂದುವರೆದಿದೆ. ಕುಮಾರಸ್ವಾಮಿ  ಹತಾಶೆಯಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಡುವಿನ ಆರೋಪ, ಪ್ರತ್ಯಾರೋಪ, ಟ್ವೀಟ್ ಸಮರ ಮುಂದುವರೆದಿದೆ. ಕುಮಾರಸ್ವಾಮಿ ಹತಾಶೆಯಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಹತಾಶೆ ಎಂಬುದು ಕುಮಾರಸ್ವಾಮಿಯವರನ್ನು ಕಿತ್ತು ತಿನ್ನುತ್ತಿದೆ. ಹೀನಾಯ ಸೋಲಿನ ಹತಾಶೆ, ಅಧಿಕಾರ ಸಿಗದಿರುವ ಹತಾಶೆ, ಪಕ್ಷ ಖಾಲಿಯಾಗುತ್ತಿರುವ ಹತಾಶೆ, ಕಾರ್ಯಕರ್ತರ ಅಸಹಕಾರದ ಹತಾಶೆ. ಈ ಎಲ್ಲಾ ಹತಾಶೆಯಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ. ವಿದ್ಯುತ್ತನ್ನೂ ಬಿಡದೆ ಕಳ್ಳತನ ಮಾಡಿದವರೊಬ್ಬರು ಸಮಾಜಕ್ಕೆ ಬುದ್ದಿ ಹೇಳುತ್ತೇನೆ ಎಂದು ಹೊರಡುವುದು ಪರಮಹಾಸ್ಯ ಎಂದು ಲೇವಡಿ ಮಾಡಿದೆ.

ಯತೀಂದ್ರ ಸಿದ್ದರಾಮಯ್ಯ ಅವರು ಸಿಎಂ ಪ್ರತಿನಿಧಿಸುವ ಕ್ಷೇತ್ರದಲ್ಲಿ ಆಶ್ರಯ ಸಮಿತಿಯ ಅಧ್ಯಕ್ಷರು ಹಾಗೂ ಕೆಡಿಪಿ ಸಮಿತಿಯ ಸದಸ್ಯರಾಗಿದ್ದು, ತಮ್ಮ ಕ್ಷೇತ್ರದ ಆಗುಹೋಗುಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುವುದು ಸಹಜ.
ಕ್ಷೇತ್ರದ ಜನರ ಅಹವಾಲುಗಳನ್ನು ಕೇಳಿ, ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದು ಪೆನ್ ಡ್ರೈವ್ ಸ್ವಾಮಿಗಳಿಗೆ ಹಾಗೂ ಬಿಜೆಪಿಯ ಮತಿಹೀನರಿಗೆ ಅಪರಾಧವಾಗಿ ಕಂಡಿದ್ದು ಹೇಗೆ? ಎಂದು ಪ್ರಶ್ನಿಸಿದೆ. 

ಕುಮಾರಸ್ವಾಮಿ ಅವರೇ, ತಾವು ಸಾಂದರ್ಭಿಕ ಶಿಶುವಿನಂತೆ ಸಿಎಂ ಆಗಿದ್ದಾಗ ಸದಾ ವರ್ಗಾವಣೆ ದಂಧೆಯಲ್ಲೇ ಮುಳುಗಿದ್ದಿರಿ, ಹಾಗಾಗಿ ಸದಾ ವರ್ಗಾವಣೆಯ ಗುಂಗಿನಲ್ಲೇ ಇರುತ್ತೀರಿ. ಡಾ. ಯತೀಂದ್ರ ಅವರು  ವರ್ಗಾವಣೆಯ ಬಗ್ಗೆ ಮಾತನಾಡಿದ್ದಾರೆ ಎಂದು ಹುಯಿಲೆಬ್ಬಿಸುತ್ತಿರುವುದು ಪೆನ್ ಡ್ರೈವ್ ಕತೆಯಂತೆಯೇ ನಕಲಿಯಲ್ಲವೇ? ಸಿನೆಮಾ ನಿರ್ಮಾಣ ಮಾಡಿದವರು ಸಿನೆಮಾ ಸ್ಕ್ರಿಪ್ಟ್ ಬರೆಯುವುದರಲ್ಲೂ ನಿಸ್ಸೀಮರಾಗಿದ್ದಾರೆ ಎಂದು ಟೀಕಿಸಿದೆ.

ಪೆನ್ ಡ್ರೈವ್ ನಾಟಕ ಠುಸ್ ಆಯ್ತು, ಸೋಫಾ ಸೆಟ್ ಸುಳ್ಳು ಬಯಲಾಯ್ತು,ಈಗ ವರ್ಗಾವಣೆ ವಿಡಿಯೋ ಎನ್ನುವ ಮತ್ತೊಂದು ಸುಳ್ಳಿನ ನಾಟಕ ಶುರು ಮಾಡಿದ್ದಾರೆ.ಕುಮಾರಸ್ವಾಮಿ ಅವರಿಗೆ ಸುಳ್ಳು ಹೇಳುವುದೆಂದರೆ ನೀರು ಕುಡಿದಷ್ಟೇ ಸಲೀಸು. ರಾಜ್ಯದ ಜನತೆ ಈಗಾಗಲೇ ಪೆನ್ ಡ್ರೈವ್ ಸ್ವಾಮಿಯ ಮಾನವನ್ನು ಮೂರು ಕಾಸಿಗೆ ಕಳೆದಿದ್ದಾರೆ, ಆದರೂ ನೌಟಂಕಿ ನಾಟಕ ಮುಂದುವರೆಸಿರುವ ಅವರನ್ನು ಕರ್ನಾಟಕದ ರಾಜಕಾರಣದ “ತಿಪ್ಪೆಗುಂಡಿ“ ಎಂದು ಪರಿಗಣಿಸುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com