ವಿರೋಧ ಪಕ್ಷದ ನಾಯಕನಾಗಿ ಆರ್ ಅಶೋಕ್ ನೇಮಕ
ವಿರೋಧ ಪಕ್ಷದ ನಾಯಕನಾಗಿ ಆರ್ ಅಶೋಕ್ ನೇಮಕ

ವಿಧಾನಸಭೆ ವಿರೋಧ ಪಕ್ಷ ನಾಯಕನಾಗಿ ಆರ್ ಅಶೋಕ್ ಆಯ್ಕೆ: ಬಿಜೆಪಿ ಹಿರಿಯ ನಾಯಕರು ಏನೆಂದರು?

ಅಂತೂ ಇಂತೂ ವಿಧಾನಸಭೆ ವಿರೋಧ ಪಕ್ಷದ ನಾಯಕನ ನೇಮಕವಾಗಿದೆ. ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಿಂದ 4 ಬಾರಿ ಶಾಸಕರಾಗಿರುವ ಆರ್ ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಹೈಕಮಾಂಡ್ ಆಯ್ಕೆ ಮಾಡಿ ನೇಮಿಸಿದೆ. ಇದಕ್ಕೆ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಶಾಸಕಾಂಗ ಪಕ್ಷ ಸಭೆಯಲ್ಲಿ ಶಾಸಕರೆಲ್ಲಾ ಒಪ್ಪಿಕೊಂಡಿದ್ದಾರೆ.
Published on

ಬೆಂಗಳೂರು: ಅಂತೂ ಇಂತೂ ವಿಧಾನಸಭೆ ವಿರೋಧ ಪಕ್ಷದ ನಾಯಕನ ನೇಮಕವಾಗಿದೆ. ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಿಂದ 4 ಬಾರಿ ಶಾಸಕರಾಗಿರುವ ಆರ್ ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಹೈಕಮಾಂಡ್ ಆಯ್ಕೆ ಮಾಡಿ ನೇಮಿಸಿದೆ. ಇದಕ್ಕೆ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಶಾಸಕಾಂಗ ಪಕ್ಷ ಸಭೆಯಲ್ಲಿ ಶಾಸಕರೆಲ್ಲಾ ಒಪ್ಪಿಕೊಂಡಿದ್ದಾರೆ.

ಅಶೋಕ್ ಅವರ ನೇಮಕಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಯಡಿಯೂರಪ್ಪ, ಸಾಕಷ್ಟು ಅನುಭವ ಇರುವ ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನಿಯುಕ್ತಿ ಮಾಡಲಾಗಿದೆ. ಬಹಳ ಒಳ್ಳೆಯ ಪ್ರಭಾವಿ ಹೋರಾಟಗಾರನನ್ನು ಈ ಸ್ಥಾನಕ್ಕೆ ತಂದಿದ್ದೇವೆ. ಇದರಿಂದ ಬಿಜೆಪಿ ಮುಂದೆ ಶಕ್ತಿಯುತವಾಗಿ ಬೆಳೆದು ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲು ಆರ್ ಅಶೋಕ್ ಅವರ ವಿರೋಧ ಪಕ್ಷದ ನಾಯಕನ ಆಯ್ಕೆ ಅನುಕೂಲವಾಗುತ್ತದೆ. ಅಶೋಕ್ ಮತ್ತು ವಿಜಯೇಂದ್ರರ ಜೊತೆ ಬರುವ ದಿನಗಳಲ್ಲಿ ಪಕ್ಷವನ್ನು ಅಧಿಕಾರ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.

ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಈ ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಹಗರಣವನ್ನು ಬಯಲು ಮಾಡಲು ಪ್ರಯತ್ನ ಮಾಡುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಹಂಬಲ ನಮ್ಮದು, ಅದರಲ್ಲಿ ಯಶಸ್ವಿಯಾಗುತ್ತೇವೆಂಬ ಸಂಪೂರ್ಣ ವಿಶ್ವಾಸ ನಮಗಿದೆ ಎಂದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಇದು ಸರ್ವಾನುಮತದ ಆಯ್ಕೆಯಾಗಿದೆ. ಅಶೋಕ್ ಅವರು ಹಿರಿಯ ನಾಯಕರು. ನಾನು ಅವರನ್ನು ಅಭಿನಂದಿಸುತ್ತೇನೆ. ಅವರ ಆಯ್ಕೆ ನನಗೆ ತುಂಬಾ ಸಂತೋಷ ತಂದಿದೆ ಎಂದಿದ್ದಾರೆ. 

ಬಿಜೆಪಿ ಹಿರಿಯ ಶಾಸಕ ಸಿ.ಎನ್.ಅಶ್ವಥ್ ನಾರಾಯಣ್, ಹೈಕಮಾಂಡ್ ಹಾಗೂ ವಿಧಾನಪರಿಷತ್ ಸದಸ್ಯರು ಆರ್.ಅಶೋಕ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ... ಮುಂಬರುವ ಅಧಿವೇಶನದಲ್ಲಿ ನಾವು ಹೇಗಿರುತ್ತೇವೆ ಎಂಬುದನ್ನು ನೋಡಬಹುದು. ಆಡಳಿತ ಪಕ್ಷವನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದರು. 

ಗೈರಾದ ಶಾಸಕರು: ಇಂದು ಬಿಜೆಪಿ ಶಾಸಕ ಪಕ್ಷದ ಸಭೆಯನ್ನು ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಅದಕ್ಕೆ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಶಿವರಾಮ್ ಹೆಬ್ಬಾರ್ ಹಾಗೂ ಎಸ್.ಟಿ. ಸೋಮಶೇಖರ್ ಗೈರಾಗಿದ್ದಾರೆ.

ಬೆಂಗಳೂರಿನ ಐಟಿಸಿ ಹೋಟೆಲ್​ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಯಿತು. ಕೇಂದ್ರದಿಂದ ವೀಕ್ಷಕರರಾಗಿ ನಿರ್ಮಲಾ ಸೀತಾರಾಮನ್, ದುಷ್ಯಂತ್ ಕುಮಾರ್ ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com