ಸಾವರ್ಕರ್ V/s ನೆಹರು: ಸಾವರ್ಕರ್ ಫೋಟೋ ತೆಗೆದರೆ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ

ವಿಧಾನಸಭೆಯಲ್ಲಿ  ಈ ಹಿಂದೆ ಬಿಜೆಪಿ ಸರ್ಕಾರ ಅಳವಡಿಸಿದ್ದ ವೀರ್ ಸಾವರ್ಕರ್ ಅವರ ಫೋಟೋ ತೆಗೆಯದಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಶನಿವಾರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್
ಕಂದಾಯ ಸಚಿವ ಆರ್.ಅಶೋಕ್

ಬೆಂಗಳೂರು: ವಿಧಾನಸಭೆಯಲ್ಲಿ  ಈ ಹಿಂದೆ ಬಿಜೆಪಿ ಸರ್ಕಾರ ಅಳವಡಿಸಿದ್ದ ವೀರ್ ಸಾವರ್ಕರ್ ಅವರ ಫೋಟೋ ತೆಗೆಯದಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಶನಿವಾರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅಶೋಕ್, ಕಾಂಗ್ರೆಸ್ ಸರ್ಕಾರ ವೀರ ಸಾವರ್ಕರ್ ಅವರ ಭಾವಚಿತ್ರವನ್ನು ತೆಗೆದುಹಾಕಿ, ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರು ಅವರ ಭಾವಚಿತ್ರವನ್ನು ಅಳವಡಿಸಲು ಯೋಜಿಸಿದೆ. ಆದರೆ ವೀರ ಸಾವರ್ಕರ್ ಅವರು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ ದೇಶಪ್ರೇಮಿ ಎಂದರು.

ಈ ಹಿಂದೆ ಬಿಜೆಪಿ ಸರ್ಕಾರ ಸಾವರ್ಕರ್ ಅವರ ಭಾವಚಿತ್ರವನ್ನು ಅಳವಡಿಸಿತ್ತು. ಈಗ ಅದನ್ನು ತೆಗೆದುಹಾಕಲು ಕಾಂಗ್ರೆಸ್ ಮುಂದಾಗಿದೆ. ಸಾವರ್ಕರ್ ಫೋಟೋದ ಬದಲು ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರು ಅವರ ಫೋಟೋವನ್ನು ಹಾಕಬೇಕೆಂದು ಅವರು(ಸರ್ಕಾರ) ವಾದಿಸುತ್ತಿದ್ದಾರೆ. ನೆಹರೂ ಭಾವಚಿತ್ರ ಅಳವಡಿಸುವುದು ವಂಶಪಾರಂಪರ್ಯ ರಾಜಕಾರಣದ ವೈಭವೀಕರಣ ಎಂದು ವಾಗ್ದಾಳಿ ನಡೆಸಿದರು.

“ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಅಜ್ಜ, ತಾಯಿ, ಮಗ ಮತ್ತು ಮೊಮ್ಮಗನ ಫೋಟೋಗಳನ್ನು ಮಾತ್ರ ಹಾಕಲು ಬಯಸುತ್ತದೆ. ಒಂದು ವೇಳೆ ಸಾವರ್ಕರ್ ಫೋಟೋ ತೆಗೆದರೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದರು.

ವಸತಿ ಸಚಿವ ಜಮೀರ್ ಅಹ್ಮದ್ ಅವರು ಕೋಮುವಾದಿ ಹೇಳಿಕೆ ನೀಡಿದ್ದಾರೆ. ಸ್ಪೀಕರ್ ಮುಸ್ಲಿಂ ಎಂದು ಹೇಳಿಕೆ ನೀಡಿದ್ದು, ಅವರಿಗೆ ನಮನ ಸಲ್ಲಿಸುವಂತೆ ಕಾಂಗ್ರೆಸ್ ನಮಗೆ ಒತ್ತಾಯಿಸುತ್ತಿದೆ. ಆದರೆ, ನಾವು ಅವರ ಸ್ಥಾನಕ್ಕೆ ಗೌರವ ನೀಡುತ್ತೇವೆ ಎಂದರು.

2022ರಲ್ಲಿ ಹಿಂದಿನ ಬಿಜೆಪಿ ಸರ್ಕಾರ ಚಳಿಗಾಲದ ಅಧಿವೇಶನದ ಮೊದಲ ದಿನ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ವೀರ್ ಸಾವರ್ಕರ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿತ್ತು. ಸುವರ್ಣ ವಿಧಾನಸೌಧದಲ್ಲಿ ವಿವಾದಿತ ವೀರ ಸಾವರ್ಕರ್ ಅವರ ಭಾವಚಿತ್ರ ಅಳವಡಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com