ದಲಿತರನ್ನು ಕೇವಲ ಮತ ಬ್ಯಾಂಕಾಗಿ ನೋಡಿದ ಕಾಂಗ್ರೆಸ್, ಆ ಸಮುದಾಯಕ್ಕೆ ಯಾವ ನ್ಯಾಯ ಕೊಟ್ಟಿದೆ? ವಿಜಯೇಂದ್ರ ಪ್ರಶ್ನೆ

ಸ್ವಾತಂತ್ರ್ಯಾನಂತರ ಚುನಾವಣೆ ವೇಳೆ ಡಾ. ಅಂಬೇಡ್ಕರ್ ಅವರ ಹೆಸರಿನೊಂದಿಗೆ ಮತ ಕೇಳಿ ಸುಮಾರು 50-55 ವರ್ಷ ನಿರಂತರವಾಗಿ ದೇಶದ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ದಲಿತ ಸಮುದಾಯಕ್ಕೆ ಯಾವ ನ್ಯಾಯ ಕೊಟ್ಟಿದೆ? ದಲಿತ ಸಮುದಾಯವನ್ನು ಮೇಲೆತ್ತಲು 50-60 ವರ್ಷಗಳು ಬೇಕೇ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ

ಬೆಂಗಳೂರು: ಸ್ವಾತಂತ್ರ್ಯಾನಂತರ ಚುನಾವಣೆ ವೇಳೆ ಡಾ. ಅಂಬೇಡ್ಕರ್ ಅವರ ಹೆಸರಿನೊಂದಿಗೆ ಮತ ಕೇಳಿ ಸುಮಾರು 50-55 ವರ್ಷ ನಿರಂತರವಾಗಿ ದೇಶದ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ದಲಿತ ಸಮುದಾಯಕ್ಕೆ ಯಾವ ನ್ಯಾಯ ಕೊಟ್ಟಿದೆ? ದಲಿತ ಸಮುದಾಯವನ್ನು ಮೇಲೆತ್ತಲು 50- 60 ವರ್ಷಗಳು ಬೇಕೇ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿಂದು ರಾಜ್ಯ ಎಸ್‍ಸಿ ಮೋರ್ಚಾದ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದಲಿತ ಸಮುದಾಯವನ್ನು ಕೇವಲ ಮತಬ್ಯಾಂಕಾಗಿ ನೋಡಿತ್ತು. ಆ ಸಮುದಾಯಕ್ಕೆ ನ್ಯಾಯ ಕೊಡುವಲ್ಲಿ ಎಡವಿದೆ ಎಂದು ಟೀಕಿಸಿದರು.

ದಲಿತ ಸಮುದಾಯಕ್ಕೆ ನ್ಯಾಯ ಕೊಡುವ ಕಳಕಳಿ, ಬದ್ಧತೆ ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ಇರಲಿಲ್ಲ. ಈ ವಿಷಯವನ್ನು ಜನರಿಗೆ ತಲುಪಿಸಬೇಕು ಎಂದು ತಿಳಿಸಿದರು. ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡುವ ಅಂತ್ಯೋದಯ ಪರಿಕಲ್ಪನೆಯನ್ನು ಬಿಜೆಪಿ ಹೊಂದಿದೆ ಎಂದು ಅವರು ತಿಳಿಸಿದರು.

ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಾಕಿದ್ದರೂ ಅವರಿಗೆ ನ್ಯಾಯ ಕೊಡಲಿಲ್ಲ. ಬದಲಾಗಿ ಅಲ್ಪಸಂಖ್ಯಾತರ ಮತಕ್ಕಾಗಿ ಅಖಂಡ ಅವರಿಗೆ ಟಿಕೆಟ್ ಅನ್ನೂ ನಿರಾಕರಿಸಿದರು. ಕಾಂಗ್ರೆಸ್ ಪಕ್ಷದ ನಡವಳಿಕೆ ಹೀಗಿದ್ದರೂ ಅವರನ್ನು ಯಾಕೆ ಕ್ಷಮಿಸಬೇಕು? ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಅವರು ಮತ್ತೊಂದೆಡೆ ರಾಜ್ಯದಲ್ಲಿ ನಾವು ಇಷ್ಟು ಜನ ಸಚಿವರಿದ್ದೇವೆ. ಸ್ಪೀಕರ್ ಸ್ಥಾನದಲ್ಲಿ ನಮ್ಮ ಕೋಮಿನವರೇ ಕೂತಿದ್ದಾರೆ ಎಂದು ಹೇಳಿದ್ದಾರೆ. ಇದು ಉದ್ಧಟತನದ ಮಾತಲ್ಲವೇ? ಇದು ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನವಿರೋಧಿ, ದಲಿತ ವಿರೋಧಿಯಲ್ಲವೇ ಎಂದು ಕೇಳಿದರು.

ದಲಿತರು ಹೇಗಿದ್ದರೂ ಬಿಜೆಪಿ ಬೆಂಬಲಿಸುವುದಿಲ್ಲ; ಕಾಂಗ್ರೆಸ್ಸಿಗೇ ಮತ ಕೊಡುತ್ತಾರೆ ಎಂಬುದೇ ಅವರ ದುರಹಂಕಾರಿ ನಡವಳಿಕೆಗೆ ಕಾರಣ ಎಂದು ಆಕ್ಷೇಪಿಸಿದರು. ರೈತಪರ, ಬಡವರ ಪರ, ಎಲ್ಲ ಸಮುದಾಯದ ಪರವಾಗಿ ಹೋರಾಡಿದ ಯಡಿಯೂರಪ್ಪನವರ ಮಗ ಎನ್ನಲು ನನಗೆ ಹೆಮ್ಮೆ ಇದೆ. ಅವರು ಯಾವತ್ತೂ ಒಂದು ಜಾತಿಗೆ ಸೀಮಿತ ಆಗಿರಲಿಲ್ಲ ಎಂದ ಅವರು, ನಾಯಕನಾಗಿ ಹೊರಹೊಮ್ಮಲು ಸ್ಥಾನ ಸಿಕ್ಕಿದರೆ ಸಾಲದು; ಅಧಿಕಾರ ಇರುತ್ತದೆ; ಅಧಿಕಾರ ಹೋಗುತ್ತದೆ. ಎಲ್ಲ ಸಮುದಾಯದವರು ಇವತ್ತೂ ಕೂಡ ಯಡಿಯೂರಪ್ಪ ಅವರನ್ನು ಯಾಕೆ ನೆನಪು ಮಾಡುತ್ತಾರೆ ಎಂದು ಕೇಳಿದರು. ಅವರು ಎಲ್ಲ ಸಮುದಾಯದ ಪರವಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಕೇವಲ ಸಾಮಾಜಿಕ ಜಾಲತಾಣ, ಪತ್ರಿಕೆಗಳಲ್ಲಿ ಫೋಟೋ ಬಂದರೆ ನಾವು ಯಶ ಪಡೆಯಲು ಅಸಾಧ್ಯ. ದಲಿತ ಸಮುದಾಯದವರ ಮಧ್ಯೆ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆದು ಪ್ರಚಲಿತ ರಾಜ್ಯ ರಾಜಕಾರಣದ ಕುರಿತು ಚರ್ಚೆ ಮಾಡಬೇಕು. ರಾಜ್ಯ ಸರಕಾರದ ವೈಫಲ್ಯ, ನರೇಂದ್ರ ಮೋದಿಜೀ ಅವರು ಕಳೆದ 9.5 ವರ್ಷಗಳಲ್ಲಿ ಮಾಡಿದ ಕಾರ್ಯಗಳು, ದೇಶದ ಅಭಿವೃದ್ಧಿ, ವಿಶ್ರಾಂತಿರಹಿತವಾಗಿ ದೇಶದ ಅಭಿವೃದ್ಧಿಗಾಗಿ ಮಾಡಿದ ಪ್ರಯತ್ನವನ್ನು ತಿಳಿಸಬೇಕು. ಕಿಸಾನ್ ಸಮ್ಮಾನ್ ಯೋಜನೆ, ಪ್ರತಿ ಹಳ್ಳಿಗೂ, ಪ್ರತಿ ಮನೆಗೂ ವಿದ್ಯುತ್ ಸಂಪರ್ಕ, ಪ್ರತಿ ಮನೆಗೂ ಶೌಚಾಲಯ ಇರಬೇಕೆಂಬ ಅವರ ಕಾರ್ಯವೈಖರಿಯನ್ನು ತಿಳಿಸುವ ಕಾರ್ಯ ಆಗಬೇಕಿದ ಎಂದು ಸಲಹೆ ನೀಡಿದರು.

ಯಡಿಯೂರಪ್ಪ ಅವರ ಸರಕಾರ ನೀಡಿದ ಭಾಗ್ಯಲಕ್ಷ್ಮಿ ಯೋಜನೆ ಜಾತಿಗೆ ಸೀಮಿತವಾಗಿತ್ತೇ? ಅವರ ಬೈಸಿಕಲ್ ಯೋಜನೆ ಒಂದು ಜಾತಿ, ಸಮುದಾಯಕ್ಕೆ ಸೀಮಿತವಾಗಿತ್ತೇ? ಎಂದು ಕೇಳಿದ ಅವರು, ಮೋದಿಜಿ, ರಾಜ್ಯದ ಬಿಜೆಪಿ ಸರಕಾರದ ಸಾಧನೆ, ರಾಜ್ಯ ಸರಕಾರದ ನಡವಳಿಕೆಯನ್ನು ಕುಂತಲ್ಲಿ ನಿಂತಲ್ಲಿ ಮಾತನಾಡಿ, ಜನರಿಗೆ ಮನವರಿಕೆ ಮಾಡಿಕೊಡಬೇಕು. ಇಲ್ಲವಾದರೆ, ಸಮಾಜ ನಮ್ಮಿಂದ ದೂರವೇ ಇರುತ್ತದೆ. ನಾವೆಲ್ಲ ವಿಸಿಟಿಂಗ್ ಕಾರ್ಡ್ ಜೊತೆ ಓಡಾಡುತ್ತಲೇ ಇರಬೇಕಾದೀತು ಎಂದು ಎಚ್ಚರಿಸಿದರು.

ಪ್ರಜಾಪ್ರಭುತ್ವ ಎಂದರೆ ಕೇವಲ ಬಹುಮತದ ಅಧಿಕಾರ ಅಲ್ಲ. ಪ್ರಜಾಪ್ರಭುತ್ವ ಎಂದರೆ ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡುವುದೇ ಆಡಳಿತ ಪಕ್ಷದ ಕೆಲಸ. ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ನೈಜ ಅರ್ಥ ಸಿಗುತ್ತದೆ ಎಂದರು. ಹೆಚ್ಚು ಹೆಚ್ಚು ಯುವಕರನ್ನು ಮುಂದೆ ತನ್ನಿ. ಯುವಕರನ್ನು ಮುಂದೆ ತರುವುದರಿಂದ ನನಗೆ ಹಿನ್ನಡೆ ಆಗುತ್ತದೆ ಎಂಬ ಭಾವನೆ ಬೇಡ ಎಂದು ಕಿವಿಮಾತು ಹೇಳಿದರು. ರಾಜ್ಯದ 28ಕ್ಕೆ 28 ಲೋಕಸಭಾ ಸ್ಥಾನ ಗೆಲ್ಲಲು ಪಕ್ಷವು ಶ್ರಮಿಸಬೇಕಿದೆ ಎಂದು ತಿಳಿಸಿದರು.

ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಎಲ್ಲ ರೀತಿಯ ಕಾರ್ಯಕ್ರಮಗಳನ್ನು ನಮ್ಮ ಸರಕಾರ ಕೊಟ್ಟಿದೆ. ದಲಿತರಿಗಾಗಿ ಅನೇಕ ಕಾರ್ಯಕ್ರಮಗಳನ್ನು ನಮ್ಮ ಸರಕಾರ ಕೊಟ್ಟಿದೆ. ಡಾ.ಅಂಬೇಡ್ಕರರು ಪಾದಸ್ಪರ್ಶ ಮಾಡಿದ 10 ಜಿಲ್ಲೆಗಳಲ್ಲಿ ಸ್ಮಾರಕ ಮಾಡುವ ಕೆಲಸವನ್ನು ನಮ್ಮ ಸರಕಾರ ಮಾಡಿದೆ ಎಂದು ವಿವರಿಸಿದರು.

ಮೋದಿಜೀ ಅವರ ಸರಕಾರವು ಡಾ. ಅಂಬೇಡ್ಕರರ ಪಂಚಕ್ಷೇತ್ರಗಳ ಅಭಿವೃದ್ಧಿ ಮಾಡಿದೆ. 11 ಸಾವಿರ ಪೌರಕಾರ್ಮಿಕರನ್ನು ನಮ್ಮ ಸರಕಾರ ಖಾಯಂ ಮಾಡಿದೆ ಎಂದು ತಿಳಿಸಿದರು. ಆದರೆ, ಕಾಂಗ್ರೆಸ್ ಸರಕಾರವು ದಲಿತರಿಗಾಗಿ ಇಟ್ಟಿದ್ದ ಎಸ್‍ಸಿಎಸ್‍ಪಿ-ಟಿಎಸ್‍ಪಿ ಹಣದ 11,700 ಕೋಟಿ ಹಣವನ್ನು ಗ್ಯಾರಂಟಿಗಾಗಿ ಬಳಸಿಕೊಂಡಿತ್ತು. ಇದು ದಲಿತರಿಗೆ ಮಾಡಿದ ದೋಖಾ. ಇದರ ವಿರುದ್ಧ ಎಸ್‍ಸಿ ಮೋರ್ಚಾ ಪ್ರಥಮ ದಿನದಿಂದ ಹೋರಾಟ ಮಾಡಿದೆ ಎಂದು ವಿವರಿಸಿದರು. ಈ ಸಂಬಂಧ ಹರಿಹರದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಲಿದ್ದೇವೆ ಎಂದು ಪ್ರಕಟಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com