ಬಿ.ವೈ.ವಿಜಯೇಂದ್ರ ಅವರನ್ನು ಅಳೆದು ತೂಗಿ ಅಧ್ಯಕ್ಷರನ್ನಾಗಿ ಮಾಡಿಲ್ಲ: ಬಿಜೆಪಿ ವಿರುದ್ಧ ಅರವಿಂದ ಲಿಂಬಾವಳಿ ಕಿಡಿ

ಬಿ.ವೈ.ವಿಜಯೇಂದ್ರ ಅವರನ್ನು ನಾವು ಅಳೆದು ತೂಗಿ ಅಧ್ಯಕ್ಷರನ್ನಾಗಿ ಮಾಡಿಲ್ಲ. ನಮ್ಮಲ್ಲಿ ಆಯ್ಕೆ ಆಗಿರುವ 66 ಜನರಲ್ಲಿ ಅನೇಕರು ಸ್ವಂತ ಶಕ್ತಿ ಮೇಲೆ ಶಾಸಕರಾಗಿದ್ದಾರೆ. ಕೆಲವರು ಹೊಂದಾಣಿಕೆ ಮೇಲೆ ಶಾಸಕರಾಗಿ ಆಯ್ಕೆ ಆಗಿದ್ದಾರೆ .
ಅರವಿಂದ ಲಿಂಬಾವಳಿ
ಅರವಿಂದ ಲಿಂಬಾವಳಿ

ಬೆಳಗಾವಿ: ಬಿ.ವೈ.ವಿಜಯೇಂದ್ರ ಅವರನ್ನು ನಾವು ಅಳೆದು ತೂಗಿ ಅಧ್ಯಕ್ಷರನ್ನಾಗಿ ಮಾಡಿಲ್ಲ. ನಮ್ಮಲ್ಲಿ ಆಯ್ಕೆ ಆಗಿರುವ 66 ಜನರಲ್ಲಿ ಅನೇಕರು ಸ್ವಂತ ಶಕ್ತಿ ಮೇಲೆ ಶಾಸಕರಾಗಿದ್ದಾರೆ. ಕೆಲವರು ಹೊಂದಾಣಿಕೆ ಮೇಲೆ ಶಾಸಕರಾಗಿ ಆಯ್ಕೆ ಆಗಿದ್ದಾರೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅರವಿಂದ ಲಿಂಬಾವಳಿ, ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿರುವ 66 ಶಾಸಕರಲ್ಲಿ ಅನೇಕರು ಸ್ವಂತ ಶಕ್ತಿ ಮೇಲೆಯೇ ಗೆದ್ದಿದ್ದಾರೆ. ಕೆಲವರು ಹೊಂದಾಣಿಕೆ ಮೇಲೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದು ಹೊಂದಾಣಿಕೆ ಮಾಡಿಕೊಳ್ಳುವವರ ಕಾಲ ಎಂದು ಲೇವಡಿ ಮಾಡಿದರು.

ಬಿ.ವೈ.ವಿಜಯೇಂದ್ರ ಅವರನ್ನು ಅಳೆದು, ತೂಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿಲ್ಲ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರೋಧ ಪಕ್ಷಗಳ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೊಂದಾಣಿಕೆಯಿಂದಲೇ ಅವರು ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನೂ ಗೆಲ್ಲಿಸಬಹುದು. ಹಾಗಾಗಿ ಅವರನ್ನು ನೇಮಕ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಕಾಂತರಾಜ್‌ ಆಯೋಗದ ವರದಿ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂತರಾಜ್‌ ಆಯೋಗದ ವರದಿಯ ಮೂಲಪ್ರತಿ ಕಳ್ಳತನವಾಗಿದೆ ಎನ್ನುತ್ತಿದ್ದಾರೆ. ಆ ವರದಿ ಸಾಫ್ಟ್‌ಕಾಪಿ ಕಂಪ್ಯೂಟರ್‌ನಲ್ಲಿ ಇರುತ್ತದೆ. ಅದನ್ನು ಕಳ್ಳತನ ‌ಮಾಡಲು ಆಗುವುದಿಲ್ಲವಲ್ಲ ಎಂದು ಹೇಳಿದ ಅವರು, ಈ ವರದಿ ಜಾರಿಯಾಗಬಾರದು ಎಂದು ಹೇಳುವ ಸಮಾಜಗಳು ಸ್ವಲ್ಪ ಸಾಮಾಜಿಕವಾಗಿ ಯೋಚಿಸಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com