ಡಿಕೆಶಿ ವಿರುದ್ಧದ ಸಿಬಿಐ ತನಿಖೆ ವಾಪಸಿಗೆ ನಿರ್ಧಾರ: ಬಿಜೆಪಿ ತೀವ್ರ ವಿರೋಧ; ಯತ್ನಾಳ್ ಹೇಳಿದ್ದು ಹೀಗೆ...
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧದ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದ ನಿರ್ಧಾರವನ್ನು ಹಿಂಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಆದಾಯ ಮೂಲಕ್ಕಿಂತ 200 ಕೋಟಿ ರೂ. ಹೆಚ್ಚು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರ ಡಿ.ಕೆ. ಶಿವಕುಮಾರ್ ಹಾಗೂ ಇತರರ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ವಹಿಸಿತ್ತು. ಆದರೆ, ಪ್ರಕರಣವನ್ನು ಸಿಬಿಐಗೆ ವಹಿಸಲು ಅಡ್ವೋಕೇಟ್ ಜನರಲ್ ಯಾವುದೇ ಸಮರ್ಥನೆ ನೀಡಿಲ್ಲ. ಸ್ಪೀಕರ್ ಅನುಮತಿಯನ್ನೂ ಪಡೆದಿಲ್ಲ. ಸಿಎಂ ಮೌಖಿಕ ಆದೇಶದ ಮೇರೆಗೆ ಸಿಬಿಐಗೆ ವಹಿಸಿದ್ದು, ಕಾನೂನುಬಾಹಿರ ಎಂಬ ಕಾರಣ ನೀಡಿ ಇದೀಗ ಪ್ರಕರಣ ವಾಪಸ್ ಪಡೆಯಲು ನಿರ್ಧರಿಸಲಾಗಿದೆ.
ಆದರೆ, ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ವಿರೋಧಿಸಿದ್ದು, ಕೂಡಲೇ ಈ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂವಿಧಾನದ ಘನತೆ, ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯುವ ನಿಟ್ಟಿನಲ್ಲಿ ತನ್ನದಲ್ಲದ ತಪ್ಪಿಗೂ ನೈತಿಕ ಹೊಣೆ ಹೊತ್ತು ಅಧಿಕಾರ ತ್ಯಾಗ ಮಾಡಿದ ಹಲವು ಮಹನೀಯರು ಗೌರವದ ರಾಜಕಾರಣಕ್ಕೆ ಇತಿಹಾಸ ಬರೆದು ಹೋಗಿದ್ದಾರೆ. ಕರ್ನಾಟಕದ ರಾದಕಾರಣಕ್ಕೆ ಕರಾಳ ಇತಿಹಾಸ ಬರೆಯಲೆಂದೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತನ್ನ ಸಂಪುಟ ಸದಸ್ಯ ಡಿಕೆ ಶಿವಕುಮಾರ್ ಅವರ ಮೇಲಿರುವ ಸಿಬಿಐ ತನಿಖೆಯ ಕೇಸ್ ಹಿಂತೆಗೆದುಕೊಳ್ಳುವ ನಿಲುವು ತಳೆದಿರುವುದು ಸಾಂವಿಧಾನಿಕ ಹಾಗೂ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಸವಾರಿ ಮಾಡಿದ ಕ್ರಮ ಎಂದು ಟೀಕಿಸಿದ್ದಾರೆ.
ಮತ್ತೊಂದೆಡೆ ಸಚಿವ ಸಂಪುಟದ ನಿರ್ಧಾರವನ್ನು ಕೋರ್ಟ್ ನಲ್ಲಿ ಪ್ರಶ್ನಿಸಲಾಗುವುದು ಎಂದು ಬಿಜೆಪಿ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯಾತ್ನಾಳ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ