ಮತ್ತೆ ಮಂಡ್ಯದಿಂದ ಸ್ಪರ್ಧಿಸುವಂತೆ ನಿಖಿಲ್ ಕುಮಾರಸ್ವಾಮಿಗೆ ಆಹ್ವಾನ; ಹಳೇ ಸೇಡು ತೀರಿಸಿಕೊಳ್ಳಲು ಜೆಡಿಎಸ್ ಪ್ಲ್ಯಾನ್!

ಮಂಡ್ಯದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿದ್ದು, ಹಳೇ ಸೇಡು ತೀರಿಸಿಕೊಳ್ಳಲು ದಳ ಪ್ಲ್ಯಾನ್ ಮಾಡಿದೆ.
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ

ಮಂಡ್ಯ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿರುವ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕಾಗಿ ಹಗ್ಗಜಗ್ಗಾಟ ನಡೆದಿದೆ. ಇದರ ನಡುವೆ ಮತ್ತೆ ಮಂಡ್ಯದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿದ್ದು, ಹಳೇ ಸೇಡು ತೀರಿಸಿಕೊಳ್ಳಲು ದಳ ಪ್ಲ್ಯಾನ್ ಮಾಡಿದೆ.

ಈ ಬಾರಿಯೂ ಮಂಡ್ಯದಿಂದಲೇ ಸ್ಪರ್ಧಿಸುವಂತೆ ನಿಖಿಲ್ ಕುಮಾರಸ್ವಮಿ ಅವರಿಗೆ ಮಂಡ್ಯ ಜಿಲ್ಲಾ ಜೆಡಿಎಸ್​ ನಾಯಕರು ಆಹ್ವಾನ ಕೊಟ್ಟಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿ.ಎಸ್​.ಪುಟ್ಟರಾಜು ಅವರು, ಲೋಕಸಭೆ ಚುನಾವಣೆಗೆ ಬಿಜೆಪಿ, ಜೆಡಿಎಸ್​ ಮೈತ್ರಿ ಫೈನಲ್ ಆಗಬೇಕಿದ್ದು, ಮಂಡ್ಯದಲ್ಲಿ ನಿಖಿಲ್​ ಕಣಕ್ಕಿಳಿಸುವಂತೆ ನಮ್ಮ ವರಿಷ್ಠರಿಗೆ ಕೇಳಿಕೊಂಡಿದ್ದೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್​​ಗೆ ಸೋಲಾಗಿತ್ತು. ಈ ಬಾರಿ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದೇವೆ ಎಂದಿದ್ದಾರೆ.

ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ, ಎಚ್​ಡಿ ಕುಮಾರಸ್ವಾಮಿ ಅಥನಾ ನಿಖಿಲ್ ಕುಮಾರಸ್ವಾಮಿ ಈ ಮೂವರಲ್ಲಿ​ ಯಾರಾದರೂ ಸ್ಪರ್ಧೆ ಮಾಡಲಿ. ಆದರೆ ಮಂಡ್ಯ ಕ್ಷೇತ್ರದಲ್ಲಿ ನಮ್ಮ ಮೊದಲ ಆದ್ಯತೆ ನಿಖಿಲ್​ ಕುಮಾರಸ್ವಾಮಿಗೆ ಎಂದು ಪುಟ್ಟರಾಜು ಹೇಳಿದ್ದಾರೆ. ಈ ಮೂಲಕ ಕಳೆದ ಚುನಾವಣೆ ಸೋಲಿಗೆ ಸೇಡು ತೀರಿಸಿಕೊಳ್ಳಲು ಜೆಡಿಎಸ್​ ನಾಯಕರು ಪ್ಲ್ಯಾನ್ ಮಾಡಿದ್ದಾರೆ.

ಈ ಮಧ್ಯೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕ್ಷೇತ್ರ ಬಿಟ್ಟು ಕೊಡುವ ಮಾತೇ ಇಲ್ಲ ಎಂದು ಪರೋಕ್ಷವಾಗಿ ಮೈತ್ರಿ ನಾಯಕರುಗಳಿಗೆ ಸಂದೇಶ ರವಾನಿಸಿದ್ದಾರೆ. ಈ ಎಲ್ಲಾ ಗೊಂದಲಗಳಿಂದಾಗಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಸೀಟು ಹಂಚಿಕೆ ಇನ್ನೂ ಅಧಿಕೃತವಾಗಿಲ್ಲ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com