ರಾಜಕೀಯ ಜೀವನದುದ್ಧಕ್ಕೂ ಜೆಡಿಎಸ್ ವಿರುದ್ಧ ಹೋರಾಟ; ಅವರ ಕಿರುಕುಳ ಮರೆಯಲು ಸಾಧ್ಯವೇ: ಮೈತ್ರಿಗೆ ಸೋಮಶೇಖರ್ ವಿರೋಧ

ಮುಂಬರುವ ಲೋಕಸಭೆ ಚುನಾವಣೆಗೆ ಜನತಾ ದಳ (ಜಾತ್ಯತೀತ) ಜೊತೆ ಬಿಜೆಪಿ ಮೈತ್ರಿಗೆ ಮಾಜಿ ಸಚಿವ ಮತ್ತು ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ವಿರೋಧ ವ್ಯಕ್ತ ಪಡಿಸಿದ್ದಾರೆ.
ಎಸ್.ಟಿ ಸೋಮಶೇಖರ್
ಎಸ್.ಟಿ ಸೋಮಶೇಖರ್
Updated on

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಜನತಾ ದಳ (ಜಾತ್ಯತೀತ) ಜೊತೆ ಬಿಜೆಪಿ ಮೈತ್ರಿಗೆ ಮಾಜಿ ಸಚಿವ ಮತ್ತು ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ವಿರೋಧ ವ್ಯಕ್ತ ಪಡಿಸಿದ್ದಾರೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೇಲಿನವರು ಸುಲಭವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಕೆಳಹಂತದ ಕಾರ್ಯಕರ್ತರು ಹಿಂಸೆ ಅನುಭವಿಸುತ್ತಾರೆ. ಉಸಿರುಕಟ್ಟುವ ವಾತಾವರಣ ಸೃಷ್ಟಿಯಾಗಿದೆ. ಮೈತ್ರಿಗೆ ವೈಯಕ್ತಿಕವಾಗಿ ನನ್ನ ವಿರೋಧವಿದೆ. ಅಧಿಕೃತ ಘೋಷಣೆ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವೆ’ ಎಂದರು.

ಮೈತ್ರಿ ಅಧಿಕೃತವಾಗಿ ಘೋಷಣೆಯಾದ ಬಳಿಕ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಯಶವಂತಪುರ ಶಾಸಕ ಸೋಮಶೇಖರ್ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ. “ನಾನು ನನ್ನ ರಾಜಕೀಯ ಜೀವನದುದ್ದಕ್ಕೂ ಜೆಡಿಎಸ್ ವಿರುದ್ಧ ಆರು ವಿಧಾನಸಭಾ ಚುನಾವಣೆಗಳಲ್ಲಿ ಹೋರಾಡಿದ್ದೇನೆ. ಬಿಜೆಪಿ ಮತ್ತು ಜೆಡಿಎಸ್‌ನ ಹಲವು ಶಾಸಕರು ಮೈತ್ರಿಗೆ ವಿರುದ್ಧವಾಗಿದ್ದರೂ ಬಹಿರಂಗವಾಗಿ ಮಾತನಾಡುತ್ತಿಲ್ಲ ಎಂದಿದ್ದಾರೆ.

‘ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರು ಮೊದಲಿನಿಂದಲೂ ಪರಸ್ಪರ ವಿರುದ್ಧವಾಗಿ ಇದ್ದವರು. ಪಕ್ಷದ ಕಾರ್ಯಕರ್ತರು ಅನುಭವಿಸಿದ ಕಿರುಕುಳವನ್ನು ಹತ್ತಿರದಿಂದ ಕಂಡಿದ್ದೇನೆ. ಪಕ್ಷಗಳು ಹೊಂದಾದರೂ, ಕಾರ್ಯಕರ್ತರ ಮಧ್ಯೆ ಹೊಂದಾಣಿಕೆ ಅಸಾಧ್ಯವಾಗಿದೆ. ಮೈತ್ರಿ ವಿರೋಧಿಸಿ ಈಗಾಗಲೇ ಹಲವು ಕಾರ್ಯಕರ್ತರು, ಬೆಂಬಲಿಗರು ಕಾಂಗ್ರೆಸ್‌ ಸೇರುವ ನಿರ್ಧಾರ ಮಾಡಿದ್ದಾರೆ. ಇದು ನನ್ನ ಕ್ಷೇತ್ರದ ಸಮಸ್ಯೆ ಮಾತ್ರವಲ್ಲ, ಇತರೆ ಶಾಸಕರೂ ತಮ್ಮ ಕ್ಷೇತ್ರಗಳಲ್ಲಿ ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಹೇಳಿದರು.

‘ನಾನೂ ಸಹ 20 ವರ್ಷಗಳಿಂದ ಜೆಡಿಎಸ್‌ ಜತೆ ಸೆಣಸಾಟ ನಡೆಸಿಕೊಂಡು ಬಂದಿದ್ದೇನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‌ ಮಧ್ಯೆ ಹೊಂದಾಣಿಕೆಯಾದರೂ, ಕಾರ್ಯಕರ್ತರು ಪರಸ್ಪರ ಮತ ಚಲಾಯಿಸಲಿಲ್ಲ. ಇದರಿಂದ ಮೈತ್ರಿ ಎಷ್ಟು ಸ್ಥಾನದಲ್ಲಿ ಗೆಲುವು ಪಡೆಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ.’ ಎಂದು ಗತಮೈತ್ರಿ ನೆನಪಿಸಿದರು.

2019ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಾಗ ಏನಾಯಿತು? ಅವರು ಗೆದ್ದಿದ್ದು ಒಂದೇ ಒಂದು ಸ್ಥಾನ ಎಂದ ಅವರು, ಜೆಡಿಎಸ್-ಬಿಜೆಪಿ ಮೈತ್ರಿಕೂಟಕ್ಕೂ ಇದೇ ಫಲಿತಾಂಶ ಬರಲಿದೆ ಎಂದು ಭವಿಷ್ಯ ನುಡಿದರು.

ತಮ್ಮ ಬೆಂಬಲಿಗರು ಕಾಂಗ್ರೆಸ್ ಸೇರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಮಾಜಿ ಸಚಿವ ಆರ್.ಅಶೋಕ ಪ್ರತಿನಿಧಿಸುವ ಪದ್ಮನಾಭನಗರ, ಆರ್.ಆರ್.ನಗರ ಮತ್ತು ಕ್ರಮವಾಗಿ ಮಾಜಿ ಸಚಿವ ಮುನಿರತ್ನ ಮತ್ತು ಶಾಸಕ ಮುನಿರಾಜು ಪ್ರತಿನಿಧಿಸುವ ದಾಸರಹಳ್ಳಿ ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com