ಡಿ.ಕೆ ಸುರೇಶ್ ಸೋಲಿಸಲು ತಂತ್ರ: ವೈರತ್ವ ಮರೆತು ಕುಮಾರಸ್ವಾಮಿ-ಯೋಗೇಶ್ವರ್ ಒಗ್ಗಟ್ಟಿನ ಮಂತ್ರ; ಗೌಡರ ಜೊತೆ ಸಿಎಂ ಚರ್ಚೆ

ಮುಂಬರುವ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಬಿಜೆಪಿಯ ಸಿಪಿ ಯೋಗೇಶ್ವರ್ ಮತ್ತು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ರಾಜಕೀಯ ಬದ್ಧ ವೈರತ್ವ ಮರೆತು ಒಂದಾಗಿದ್ದಾರೆ.
ಸಿಎಂ ಜೊತೆ ದೇವೇಗೌಡರ ಉಭಯ ಕುಶಲೋಪರಿ
ಸಿಎಂ ಜೊತೆ ದೇವೇಗೌಡರ ಉಭಯ ಕುಶಲೋಪರಿ

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಬಿಜೆಪಿಯ ಸಿಪಿ ಯೋಗೇಶ್ವರ್ ಮತ್ತು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ರಾಜಕೀಯ ಬದ್ಧ ವೈರತ್ವ ಮರೆತು ಒಂದಾಗಿದ್ದಾರೆ.

ಡಿಸಿಎಂ ಡಿ ಕೆ ಶಿವಕುಮಾರ್  ಸಹೋದರ ಡಿ ಕೆ ಸುರೇಶ್ ಅವರ ಭದ್ರಕೋಟೆಯಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಉತ್ಸಾಹ ತೋರಿದ್ದಾರೆ.

ಇತ್ತೀಚಿನವರೆಗೂ ಭಿನ್ನಾಭಿಪ್ರಾಯ ಹೊಂದಿದ್ದ ಒಕ್ಕಲಿಗ ಮುಖಂಡರಾದ ಕುಮಾರಸ್ವಾಮಿ ಮತ್ತು ಬಿಜೆಪಿಯ ಸಿಪಿ ಯೋಗೇಶ್ವರ್ ಅವರು ಒಕ್ಕಲಿಗರೂ ಆದ ಶಿವಕುಮಾರ್ ವಿರುದ್ಧ ಒಗ್ಗೂಡಿ ಸುರೇಶ್ ಅವರನ್ನು ಸೋಲಿಸಲು ಉತ್ಸುಕರಾಗಿದ್ದಾರೆ.

ಭಾನುವಾರ ಚನ್ನಪಟ್ಟಣದಲ್ಲಿ ಯೋಗೇಶ್ವರ್ ತಮ್ಮ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದರೆ, ಕುಮಾರಸ್ವಾಮಿ ರಾಮನಗರ, ಕನಕಪುರ ಮತ್ತು ಮಾಗಡಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರನ್ನು ಭೇಟಿ ಮಾಡಿದರು.

ಈಗ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಕುಮಾರಸ್ವಾಮಿ ಯೋಗೇಶ್ವರ್ ಒಟ್ಟಾದರೆ ಬಿಜೆಪಿ ಅಭ್ಯರ್ಥಿ ಗೆಲುವು ಸುಲಭವಾಗಲಿದೆ. ಹೀಗಾಗಿ ಇಬ್ಬರ ನಡುವೆ ಏನೇ ವೈಷಮ್ಯ ಇದ್ದರೂ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಉಭಯ ನಾಯಕರು ಒಂದಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಅನಿರೀಕ್ಷಿತವಾಗಿ ಭೇಟಿಯಾದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಗಳೂರಿಗೆ ತೆರಳಲು ಬಂದಿದ್ದ ದೇವೇಗೌಡ ಮತ್ತು ಅವರ ಪತ್ನಿ ಚನ್ನಮ್ಮ ಮುಖಾಮುಖಿಯಾದರು.

ದೇವೇಗೌಡ ಮತ್ತು ಚನ್ನಮ್ಮ ಅವರ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ, ಕೆಲಹೊತ್ತು ದೇವೇಗೌಡರ ಜೊತೆ ಕುಶಲೋಪರಿ ಮಾತುಕತೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com