ಸಿದ್ದರಾಮಯ್ಯಗೆ ಇರುವ ಎದೆಗಾರಿಕೆ ನಿಮಗೆ ಇಲ್ವಲ್ಲಾ; ನಿಮ್ಮದು ಉತ್ತರ ಕುಮಾರನ ಪೌರುಷ: ಡಿಸಿಎಂ ಕಾಲೆಳೆದ ಜಿಟಿ ದೇವೇಗೌಡ

ಸೋನಿಯಾ ನಮ್ಮ ತಾಯಿ, ಪ್ರಿಯಾಂಕ ನನ್ನ ಸಹೋದರಿ ಅಂದ್ರಿ, ಒಂದೇ ಒಂದು ಬಾರಿ ಅಧಿಕಾರ ಕೊಡಿ ಅಂದ್ರಿ, ಆದ್ರೆ ನೀವು ಸಿಎಂ ಆದ್ರಾ, ಕಾಂಗ್ರೆಸ್ ಅಧ್ಯಕ್ಷ ಡಿಕೆಶಿಯದ್ದು ಉತ್ತರನ ಪೌರುಷ.
ಜಿ.ಟಿ ದೇವೇಗೌಡ
ಜಿ.ಟಿ ದೇವೇಗೌಡ

ಬೆಂಗಳೂರು: ಸೋನಿಯಾ ನಮ್ಮ ತಾಯಿ, ಪ್ರಿಯಾಂಕ ನನ್ನ ಸಹೋದರಿ ಅಂದ್ರಿ, ಒಂದೇ ಒಂದು ಬಾರಿ ಅಧಿಕಾರ ಕೊಡಿ ಅಂದ್ರಿ, ಆದ್ರೆ ನೀವು ಸಿಎಂ ಆದ್ರಾ, ಕಾಂಗ್ರೆಸ್ ಅಧ್ಯಕ್ಷ ಡಿಕೆಶಿಯದ್ದು ಉತ್ತರನ ಪೌರುಷ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನೂ ಎರಡೂವರೆ ವರ್ಷ ಮುಖ್ಯಮಂತ್ರಿ ಅಂತ ಹೇಳೋ ತಾಕತ್ತು ಇಲ್ವ ಡಿಕೆಶಿಯವ್ರೇ, ಸಿದ್ದರಾಮಯ್ಯಗೆ ಇರುವ ಎದೆಗಾರಿಕೆ ನಿಮಗೆ ಇಲ್ವಲ್ಲ. ಉತ್ತರನ ಪೌರುಷ ನಿಮ್ಮದು ಅಂತ ಜನ ಮಾತನಾಡುತ್ತಿದ್ದಾರೆ ಎಂದು ಡಿ ಕೆಶಿವಕುಮಾರ್ ಅವರ ಕಾಲೆಳೆದಿದ್ದಾರೆ.

ಮೈತ್ರಿ ಸರ್ಕಾರ ಯಾರು ತೆಗೆದ್ರು ಅಂತ ಕುಮಾರಸ್ವಾಮಿಗೆ ಇಂಚಿಂಚೂ ಗೊತ್ತಿದೆ. ಕುಮಾರಸ್ವಾಮಿ ಅವರಿಗೆ ಮಾತ್ರ ಗೊತ್ತು, ಆದರೆ ನಮ್ಮ ಯಾವ ಶಾಸಕರ ಜೊತೆ ಅದನ್ನ ಹಂಚಿಕೊಂಡಿಲ್ಲ. ಈಗ ಒಂದೊಂದೆ ಹೇಳುತ್ತಿದ್ದಾರೆ, ಜನರಿಗೆ ಸತ್ಯವನ್ನ ಹೇಳಬೇಕು ಎಂದರು.

ತೀವ್ರ ಬರಗಾಲ ಇರುವಾಗ ಕೃಷಿ ಇಲಾಖೆ ಸತ್ತು ಮಲಗಿದೆ.‌ 200 ಯೂನಿಟ್ ವರೆಗೆ ಉಚಿತ‌ ವಿದ್ಯುತ್ ಒದಗಿಸುವುದಾಗಿ ಸರ್ಕಾರ ಘೋಷಿಸಿದೆ. ರೈತರಿಗೆ ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸರಿಯಾಗಿ ಲಭ್ಯವಾಗುತ್ತಿಲ್ಲ. ರೈತರ ಬಗ್ಗೆ ಮಾತನಾಡಿದರೆ ಸಾಲದು. ರೈತರ ಕೆಲಸವನ್ನೂ ಮಾಡಬೇಕು ಎಂದು ಹೇಳಿದರು.

ಬಿಪಿಎಲ್ ಕುಟುಂಬಗಳ ಪ್ರತಿ ವ್ಯಕ್ತಿಗೆ ತಿಂಗಳಿಗೆ ಹತ್ತು ಕೆ.ಜಿ. ಅಕ್ಕಿ ವಿತರಿಸುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೊಡುತ್ತಿರುವ ಐದು ಕೆ.ಜಿ.‌ ಅಕ್ಕಿಯ ವಿತರಣೆಗೆ ಈ ಸರ್ಕಾರದ ಸಾಧನೆ ಸೀಮಿತವಾಗಿದೆ ಎಂದು ಟೀಕಿಸಿದರು‌.

ಕೃಷಿ ಕ್ಷೇತ್ರ ಅಭಿವೃದ್ಧಿ ಆಗದೇ ದೇಶ ಉದ್ಧಾರ ಆಗಲ್ಲ. ಈ ಮೂಲಕ ರೈತರು ಉದ್ಧಾರ ಆಗಬೇಕು. ನೀವು ಬಂದು ಐದು ತಿಂಗಳಾಗಿದೆ. ಸರ್ಕಾರದ ವರದಿ ಪ್ರಕಾರ 4 ಸಾವಿರ ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ. 40 ಲಕ್ಷ ಹೆಕ್ಟೇರ್ ನಷ್ಟು ಬೆಳೆ ಒಣಗಿದೆ ಎಂದು ವರದಿ ಕೊಟ್ಟಿದ್ದಾರೆ. ಹಿಂದೆಂದೂ ಕಂಡರಿಯದ ಬರಗಾಲ ಇದೆ. ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ.

ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಪಿಎಂ ಕಿಸಾನ್ ಯೋಜನೆ ಅಡಿ, ರಾಜ್ಯ ಸರ್ಕಾರ ನೀಡುತ್ತಿದ್ದ ನಾಲ್ಕು ಸಾವಿರ ಹಣ ನಿಲ್ಲಿಸಿದ್ದಾರೆ. ಇಷ್ಟೆಲ್ಲ ಮಾಡಿ ಈಗ ರೈತರ ಬಗ್ಗೆ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಮಾಡಲು ಸಾಧ್ಯವಾಗ್ತಾ ಇಲ್ಲ, ಎನ್​ಡಿಆರ್​​ಎಫ್ ಮೂಲಕ ಹಣ ನೀಡಿ ಎಂದು ಹಿಂದಿನ ಸರ್ಕಾರದ ಅವಧಿಯಲ್ಲಿ ಹೇಳುತ್ತಿದ್ದರು. ಆದರೆ ನಿಮ್ಮ ಸರ್ಕಾರ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ನೀವೇ ಸಿಎಂ ಆಗಿದ್ದೀರ, ನಿಮ್ಮ ಕೈಯಲ್ಲೇ ಸರ್ಕಾರ ಇದೆ ಎಂದು ಜಿಟಿಡಿ ಟೀಕಾ ಪ್ರಹಾರ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com