ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆ ಕಾಂಗ್ರೆಸ್ಸಿನ ಅಂತರಾಳದ ಧಿಮಾಕು, ದರ್ಪ ಎಂದ ಬಿಜೆಪಿ!

ಕಾಂಗ್ರೆಸ್ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ನಿರಂತರ ಆರೋಪಗಳ ನಡುವೆ ಮಾಗಡಿ ಕಾಂಗ್ರೆಸ್ ಶಾಸಕ ನೀಡಿರುವ ಹೇಳಿಕೆ ವಿರುದ್ಧ ಬಿಜೆಪಿ ಕಿಡಿಕಾರಿದೆ. 
ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ
ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ನಿರಂತರ ಆರೋಪಗಳ ನಡುವೆ ಮಾಗಡಿ ಕಾಂಗ್ರೆಸ್ ಶಾಸಕ ನೀಡಿರುವ ಹೇಳಿಕೆ ವಿರುದ್ಧ ಬಿಜೆಪಿ ಕಿಡಿಕಾರಿದೆ. ಹೌದು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರವಾಗಿ ಬುಧವಾರ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೆಚ್. ಸಿ.ಬಾಲಕೃಷ್ಣ ನೀಡಿದ್ದ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ರಾಜ್ಯದಲ್ಲಿ ಮುಂದಿನ ಐದು ವರ್ಷ ನಮ್ಮ ಸರ್ಕಾರ ಇರುತ್ತದೆ. ಬೂತ್ ಲೆಕ್ಕಾಚಾರದ ಮೇಲೆ ಎಲೆಕ್ಷನ್ ಆಗುತ್ತೆ. ಯಾವ್ ಬೂತ್ ನಲ್ಲಿ ನಮಗೆ ಹೆಚ್ಚು ಮತ ಬರುತ್ತದೆಯೋ ಅಲ್ಲಿ ಕೆಲಸ ಮಾಡುತ್ತೇವೆ. ವೋಟ್ ಹಾಕದಿದ್ದರೆ, ಅಂತಹ ಬೂತ್​ಗಳ ಬಗ್ಗೆ ಆಲೋಚನೆ ಮಾಡುತ್ತೀವಿ. ಹಾಗಾಗಿ ಇದನ್ನ ಜನ ಯೋಚನೆ ಮಾಡಬೇಕು ಎಂದು ಪರೋಕ್ಷವಾಗಿ ಕಾಂಗ್ರೆಸ್ ಗೆ ಮತಹಾಕದಿದ್ರೆ ಅಭಿವೃದ್ಧಿ ಮಾಡಲ್ಲ ಎನ್ನುವ ಅರ್ಥದಲ್ಲಿ ಹೇಳಿದ್ದರು.

ಬಾಲಕೃಷ್ಣ ಹೇಳಿಕೆಯನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಬಿಜೆಪಿ, ವೋಟ್ ಕೊಟ್ರೆ ಮಾತ್ರ ಕೆಲಸ ಮಾಡ್ತೀವಿ ಇಲ್ಲ ಅಂದರೆ ಕೆಲಸ ಮಾಡೋದೇ ಇಲ್ಲ ಎಂದು ಮಾಗಡಿಯ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಅವರು ಕಾಂಗ್ರೆಸ್ಸಿನ ಅಂತರಾಳದ ಧಿಮಾಕು, ದರ್ಪವನ್ನು ತೋರಿದ್ದಾರೆ. ಕಾಂಗ್ರೆಸ್ ಗೆ ಅಧಿಕಾರ ಕೊಟ್ಟ ಜನರು ಈಗಾಗಲೇ ಸಿದ್ದರಾಮಯ್ಯ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಜನರಿಗೆ ಗ್ಯಾರಂಟಿಗಳು ಸರಿಯಾಗಿ ಸಿಗುತ್ತಿಲ್ಲ, ಅಭಿವೃದ್ಧಿಯೂ ಇಲ್ಲ. ನೆಮ್ಮದಿಯ ಬದುಕು ಅಂತೂ ಇಲ್ಲವೇ ಇಲ್ಲ ಎಂದು ಟೀಕಾಪ್ರಹಾರ ನಡೆಸಿದೆ. 

ಈ ಮಧ್ಯೆ ತಮ್ಮ ಹೇಳಿಕೆಯನ್ನು ಬಾಲಕೃಷ್ಣ ಸಮರ್ಥಿಸಿಕೊಂಡಿದ್ದಾರೆ. ವೋಟ್ ಹಾಕದೆ ಇರುವವರಿಗೆ ಕೆಲಸ ಮಾಡಲ್ಲ ಎಂದು ಹೇಳಿಲ್ಲ. ಆಲೋಚನೆ ಮಾಡುತ್ತೇಬೆ ಎಂದಿದ್ದೇನೆ. ಹೆಚ್ಚು ಲೀಡ್ ಕೊಡುವ ಬೂತ್​​ಗಳ ಬಗ್ಗೆ ಆಸಕ್ತಿ ವಹಿಸುತ್ತೇವೆ. ಕಡಿಮೆ‌ ಲೀಡ್ ಕೊಡುವ ಬೂತ್​​ಗೆ ಕಡಿಮೆ ಆಸಕ್ತಿ ವಹಿಸುತ್ತೇವೆ. ಇದರಲ್ಲಿ ದ್ವೇಷ ರಾಜಕಾರಣ ಏನಿದೆ?. ನಾನೇನು ಜಗಳ ಮಾಡೋಕೆ ಹೋಗಿದ್ದೀನಾ ಎನ್ನುವ ಮೂಲಕ ತಾವು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com