ಎಟಿಎಂ ಸರ್ಕಾರ ಮೈಸೂರು ದಸರಾದಲ್ಲಿಯೂ ದಂಧೆ, ಕಿಕ್ ಬ್ಯಾಕ್: ಬಿಜೆಪಿ ಆರೋಪ
ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಮೈಸೂರಿನವರೇ ಆದ ಅಂತರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ ಅವರನ್ನು ಆಹ್ವಾನಿಸಿದ ದಸರಾ ಅಧಿಕಾರಿಗಳು ಸಂಭಾವನೆಯಲ್ಲಿ ಕಮಿಷನ್ಗೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.
ಸಂಭಾವನೆ ಗೊತ್ತು ಮಾಡಿದ ಅಧಿಕಾರಿಗಳು ಬಳಿಕ ಅವರನ್ನು ಸಂಪರ್ಕಿಸಿದ್ದು, ಸಂಭಾವನೆಗಿಂತ ಮೂರು ಲಕ್ಷ ರೂ. ಹೆಚ್ಚು ಕೊಡುತ್ತೇವೆ. ಹೆಚ್ಚುವರಿಯಾಗಿ ಜಮೆಯಾಗಿರುವ 3 ಲಕ್ಷ ರೂ. ಹಣವನ್ನು ವಾಪಸ್ ನೀಡಬೇಕು ಎಂದು ಕೇಳಿದ್ದಾರೆ. ಇದಕ್ಕೆ ಪಂಡಿತ್ ರಾಜೀವ್ ತಾರಾನಾಥ್ ಅವರು ನಿರಾಕರಿಸಿದ್ದರಿಂದ ಅವರನ್ನು ದಸರಾ ಕಾರ್ಯಕ್ರಮದಿಂದ ಕೈಬಿಡಲಾಗಿದೆ ಎನ್ನಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವರದಿಯೊಂದನ್ನು ಉಲ್ಲೇಖಿಸುತ್ತಾ ಸಿದ್ದರಾಮಯ್ಯ ಸರ್ಕಾರ ವಿರುದ್ಧ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ. ಎಟಿಎಂ ಸರ್ಕಾರ ನಾಡಿನ ಹೆಮ್ಮೆಯಾದ ಮೈಸೂರು ದಸರಾದಲ್ಲಿಯೂ ದಂಧೆ ನಡೆಸಿ ಕಿಕ್ ಬ್ಯಾಕ್ ಪಡೆದಿರುವುದು ಕರ್ನಾಟಕಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು ಆರೋಪಿಸಿದೆ.
ಲೂಟಿ ಮಾಡಲೆಂದೇ ಅಧಿಕಾರ ಹಿಡಿದಿರುವ ಎಟಿಎಂ ಸರ್ಕಾರ ಮೈಸೂರಿನವರೇ ಆದ ಅಂತರಾಷ್ಟ್ರೀಯ ಖ್ಯಾತಿಯ ಸಾರೋದ್ ವಾದಕ ಪದ್ಮಶ್ರೀ ಪಂಡಿತ್ ತಾರಾನಾಥ್ ಅವರಿಗೆ ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಅಧಿಕಾರಿಗಳು ಅವರಿಂದಲೇ ಕಮಿಷನ್ ಕೇಳಿದ್ದಾರೆಂದರೆ ಅಧಿಕಾರಿಗಳಿಗೆ ಕಾಂಗ್ರೆಸ್ ಎಂತಹ ಟಾರ್ಗೆಟ್ ನೀಡಿರಬೇಕು. ಕಮಿಷನ್ ವ್ಯವಹಾರಕ್ಕೆ ತಾರಾನಾಥ್ ಅವರು ಒಪ್ಪದ ಕಾರಣ ಮೇರು ಕಲಾವಿದರಿಗೂ ವೇದಿಕೆ ನೀಡಲು ಲಜ್ಜೆಬಿಟ್ಟು ನಿರಾಕರಿಸಿರುವ ಸಿದ್ದರಾಮಯ್ಯ ಸರ್ಕಾರ ಕಂಡ ಕಂಡಲ್ಲಿ ಕಂಡಿದ್ದೆಲ್ಲಾ ಲೂಟಿ ಮಾಡಲು ಹಪಾಹಪಿಸುತ್ತಿದೆ ಎಂದು ಟೀಕಾಪ್ರಹಾರ ನಡೆಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ