ರಾಜಕೀಯ ವೈರಿಗಳ ವಿರುದ್ಧ ಗೌಡರ ಚಾಣಾಕ್ಷ ನಡೆ: ರಾಮಕೃಷ್ಣ ಹೆಗಡೆ, ಸಿದ್ದರಾಮಯ್ಯ ಈಗ ಇಬ್ರಾಹಿಂ; ತಿರುಗಿಬಿದ್ದವರಿಗೆ ಗೇಟ್ ಪಾಸ್!

ಜೆಡಿಎಸ್ ಪಕ್ಷ ಹಾಗೂ ತಮ್ಮ ಕುಟುಂಬದ ವಿರುದ್ಧ ತಿರಗಿ ಬಿದ್ದವರನ್ನು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಯಾವತ್ತೂ ಸಹಿಸುವುದಿಲ್ಲ, ಹಿಂದಿನಂತೆ ಈಗಲು ಕೂಡ ಅದನ್ನೇ ಮಾಡಿದ್ದಾರೆ. ದಳಪತಿಗಳ ವಿರುದ್ಧ ಬಂಡಾಯ ಸಾರಿದ್ದ ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.
ರಾಮಕೃಷ್ಣ ಹೆಗಡೆ, ಸಿದ್ದರಾಮಯ್ಯ ಮತ್ತು ಇಬ್ರಾಹಿಂ
ರಾಮಕೃಷ್ಣ ಹೆಗಡೆ, ಸಿದ್ದರಾಮಯ್ಯ ಮತ್ತು ಇಬ್ರಾಹಿಂ

ಬೆಂಗಳೂರು: ಜೆಡಿಎಸ್ ಪಕ್ಷ ಹಾಗೂ ತಮ್ಮ ಕುಟುಂಬದ ವಿರುದ್ಧ ತಿರಗಿ ಬಿದ್ದವರನ್ನು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಯಾವತ್ತೂ ಸಹಿಸುವುದಿಲ್ಲ, ಹಿಂದಿನಂತೆ ಈಗಲು ಕೂಡ ಅದನ್ನೇ ಮಾಡಿದ್ದಾರೆ. ದಳಪತಿಗಳ ವಿರುದ್ಧ ಬಂಡಾಯ ಸಾರಿದ್ದ ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.

ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ನಾಯಕರ ವಿರುದ್ಧ ಇಬ್ರಾಹಿಂ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು, ಜೊತೆಗೆ ತಮ್ಮದೇ ಒರಿಜಿನಲ್ ಜೆಡಿಎಸ್ ಎಂದು ಘೋಷಿಸಿಕೊಂಡಿದ್ದರು.    

ದೇವೇಗೌಡರು ಜೆಡಿಎಸ್ ಕಾರ್ಯಕಾರಿ ಸಮಿತಿ ವಿಸರ್ಜನೆ ಮಾಡಿರುವುದು ಒಂದು ಚಾಣಾಕ್ಷ ನಡೆ, ಆದರೆ ಇದು ನಿರೀಕ್ಷಿತ ಕ್ರಮವಾಗಿದೆ. ಪಕ್ಷ ಅಥವಾ ರಾಜ್ಯಾಧ್ಯಕ್ಷ ಸ್ಥಾನದಿಂದ ಹೊರಹಾಕಲ್ಪಟ್ಟರೆ, ಇಬ್ರಾಹಿಂ ಅಧ್ಯಕ್ಷ ಸ್ಥಾನ ಮತ್ತು ಚಿಹ್ನೆಯನ್ನು ಪಡೆಯಲು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ. ರಾಷ್ಟ್ರೀಯ ಅಧ್ಯಕ್ಷರಾಗಿ, ಗೌಡರು ಪಕ್ಷವನ್ನು ಸಂಭವನೀಯ ವಿಭಜನೆಯಿಂದ ರಕ್ಷಿಸಲು ತಮ್ಮ ಅಧಿಕಾರವನ್ನು ಬಳಸಿದ್ದಾರೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ಸಿಎಂ ಇಬ್ರಾಹಿಂ ಅವರಿಗೆ ಪಕ್ಷದಲ್ಲಿ ಸ್ಥಾನವಿಲ್ಲ ಎಂದು ಹೇಳುವ ಮೂಲಕ ಭಿನ್ನಾಭಿಪ್ರಾಯವನ್ನು ನಿಯಂತ್ರಿಸಲು ಗೌಡರು ಪ್ರಯತ್ನಿಸುತ್ತಿರುವುದು ನಿರೀಕ್ಷಿತ ಕ್ರಮವಾಗಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಜೆಡಿಎಸ್ ನಾಯಕತ್ವದ ನಿರ್ಧಾರದ ವಿರುದ್ಧ ಎಂದುರಾಗುವ  ಭಿನ್ನಾಭಿಪ್ರಾಯ ತಡೆಗಟ್ಟಲು ಮೈದಾನ ಸಿದ್ಧಪಡಿಸಲಾಗಿದೆ ಎಂದು ಸಂದೀಪ್ ಶಾಸ್ತ್ರಿ ತಿಳಿಸಿದ್ದಾರೆ.  ವಾಸ್ತವವೆಂದರೆ ಜೆಡಿಎಸ್ ಹೆಚ್ಚು ಕಡಿಮೆ ಕುಟುಂಬ ನಿಯಂತ್ರಣದಲ್ಲಿರುವ ಪಕ್ಷವಾಗಿದ್ದು, ಸಿದ್ದರಾಮಯ್ಯ ಸೇರಿದಂತೆ ಅವರ ಹಿಡಿತವನ್ನು ಮುರಿಯಲು ಪ್ರಯತ್ನಿಸಿದವರು ಯಾರು ಯಶಸ್ವಿಯಾಗುವುದಿಲ್ಲ.ಈಗ ಇಬ್ರಾಹಿಂನ ದಂಗೆಯ ಸಂಭವನೀಯ ಫಲಿತಾಂಶ ಸೂಚಿಸುತ್ತದೆ ಶಾಸ್ತ್ರಿ ಹೇಳಿದರು.

1996ರಲ್ಲಿ ಜನತಾದಳದಿಂದ ದಿವಂಗತ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, 2005ರಲ್ಲಿ ಜೆಡಿಎಸ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರರನ್ನು ಉಚ್ಛಾಟಿಸಲಾಗಿತ್ತು. ತಮ್ಮ ರಾಜಕೀಯ ವೈರಿಗಳ ವಿರುದ್ಧ  ಮಾಜಿ ಪ್ರದಾನಿ ಎಚ್.ಡಿ ದೇವೇಗೌಡರು ಪರಿಣಾಮಕಾರಿಯಾಗಿ ಕ್ರಮ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ದೇವೇಗೌಡರು ಪ್ರಧಾನಿಯಾಗಿದ್ದಾಗ, ಆಗಿನ ರಾಷ್ಟ್ರೀಯ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಜನತಾದಳದಿಂದ  ರಾಮಕೃಷ್ಣ ಹೆಗ್ಡೆ ಅವರನ್ನು ವಜಾಗೊಳಿಸಿದ್ದರು. ಇದರ ಬೆನ್ನಲ್ಲೇ ಹೆಗ್ಗಡೆಯವರು ‘ರಾಷ್ಟ್ರೀಯ ನವ ನಿರ್ಮಾಣ ವೇದಿಕೆ’ ಎಂಬ ರಾಜಕೀಯ ವೇದಿಕೆ ಸ್ಥಾಪಿಸಿ ರಾಜ್ಯಾದ್ಯಂತ ಸಂಚರಿಸಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಆದರೆ ಮಂಡ್ಯ, ಹಾಸನ ಸೇರಿದಂತೆ ಹಳೇ ಮೈಸೂರಿನ ಒಕ್ಕಲಿಗ ಭದ್ರಕೋಟೆಯಲ್ಲಿ ಅವರಿಗೆ ವಿರೋಧ ಎದುರಾಯಿತು.

ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಸಿದ್ದರಾಮಯ್ಯನವರೊಂದಿಗಿನ ಸಂಬಂಧ ಹಳಸಿದ ಹಿನ್ನೆಲೆಯಲ್ಲಿ ದೇವೇಗೌಡರು  ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನಿಂದ ಉಚ್ಛಾಟನೆ ಮಾಡಿದ್ದರು, 2005ರಲ್ಲಿ ಆಗಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದಾಗ ಸಿಎಂ ಸ್ಥಾನ ಕಾಂಗ್ರೆಸ್ ಪಾಲಾಯಿತು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಿಎಂ ಸ್ಥಾನ ನೀಡಲು ಸಿದ್ಧರಿದ್ದರೂ ಗೌಡರು ಸಿಎಂ ಸ್ಥಾನ ನಿರಾಕರಿಸಿದ್ದಕ್ಕೆ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದರು.

ಅಸಮಾಧಾನಗೊಂಡ ಸಿದ್ದರಾಮಯ್ಯ ಅವರು ಸ್ವತಂತ್ರವಾಗಿ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಸಂಕ್ಷಿಪ್ತ ರೂಪ) ಪ್ರಾರಂಭಿಸಿದರು. ಕೋಲಾರ ಮತ್ತು ಹುಬ್ಬಳ್ಳಿಯಲ್ಲಿ ಮೆಗಾ ರ್ಯಾಲಿಗಳನ್ನು ಆಯೋಜಿಸಿದರು. ಅದು ಗೌಡರ ಕಣ್ಣು ಕುಕ್ಕಿತು, ಅಂತಿಮವಾಗಿ ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನಿಂದ ಹೊರ ಹಾಕಿದರು.

ಕುರುಬ ಸಮುದಾಯದ ಪ್ರಬಲ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ತಮ್ಮ ಉಚ್ಚಾಟನೆಗೆ ಅದಾಗಲೇ ವೇದಿಕೆ ಸಿದ್ಧಪಡಿಸಿಕೊಂಡಿದ್ದರು. ದೇವೇಗೌಡರು ತನಗೆ ಅನ್ಯಾಯ ಮಾಡಿದ್ದಾರೆ ಎಂದು ಜನಸಾಮಾನ್ಯರಲ್ಲಿ ಬಳಿ ತಮ್ಮ ನೋವು ತೋಡಿಕೊಂಡರು. ಅದಾದ ನಂತರ ಅವರು ಪ್ರಬಲ ನಾಯಕರಾಗಿ ಹೊರಹೊಮ್ಮಿದರು. ಈ ವೇಳೆ ಇಬ್ರಾಹಿಂ ಸೇರಿದಂತೆ ಹಲವು ನಾಯಕರು ಜೆಡಿಎಸ್ ತೊರೆದು ಸಿದ್ದರಾಮಯ್ಯ ಅವರೊಂದಿಗೆ ರಾಜ್ಯ ಪ್ರವಾಸ ಕೈಗೊಂಡಿದ್ದರು.

ಈಗ ಇಬ್ರಾಹಿಂ ತಮಗೆ ಆಗಿರುವ ಅನ್ಯಾಯವನ್ನು ಹೇಗೆ ಸರಿ ಪಡಿಸಿಕೊಳ್ಳುತ್ತಾರೆ ಎಂಬುದು ಎಲ್ಲರ ಕುತೂಹಲ, ಈಗಾಗಲೇ ಮಂಡ್ಯದ ಒಕ್ಕಲಿಗ ಭದ್ರಕೋಟೆ ಸೇರಿದಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ರಾಹಿಂ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com