'ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಮೇಲೆ ಪಕ್ಷ ಹಾಳಾಯಿತು; 37 ಇದ್ದ ಶಾಸಕರ ಸಂಖ್ಯೆ 19 ಸ್ಥಾನಗಳಿಗೆ ಕುಸಿಯಿತು!'

ನೀವು ಹೇಳುವ ಹಾಗೆ ಚನ್ನಪಟ್ಟಣದಲ್ಲಿ ನಿಮ್ಮ ನೇತೃತ್ವದಲ್ಲಿ ಮುಸ್ಲಿಮರು ಮತ ಹಾಕಿರುವುದರಿಂದ ಕುಮಾರಣ್ಣನವರು 20 ಸಾವಿರ ಮತದಿಂದ ಆರಿಸಿ ಬಂದಿದ್ದಾರೆ ಎಂದು ಹೇಳಿದ್ದಿರ. 2018ರ ಚುನಾವಣೆಯಲ್ಲಿ ಕುಮಾರಣ್ಣನವರು 1 ಲಕ್ಷ ಮತಗಳ ಅಂತರದಿಂದ ಗೆಲುವು ಕಂಡಿದ್ದರು, ಆಗ  ನೀವು ನಮ್ಮ ಪಕ್ಷದಲ್ಲಿ ಇರಲೇ ಇಲ್ಲ ಎಂದು ಹೇಳಿದ್ದಾರೆ.
ಸಿಎಂ ಇಬ್ರಾಹಿಂ
ಸಿಎಂ ಇಬ್ರಾಹಿಂ

ಕಲಬುರಗಿ: ಯಾವುದೇ ಜೆಡಿಎಸ್ ಶಾಸಕರು ಸಿ ಎಂ ಇಬ್ರಾಹಿಂ ಅವರ ನಿಲುವನ್ನು ಬೆಂಬಲಿಸುತ್ತಿಲ್ಲ ಮತ್ತು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮತ್ತು ಜೆಡಿಎಸ್ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದ್ದಾರೆ ಎಂದು ಜೆಡಿ (ಎಸ್) ರಾಜ್ಯ ಘಟಕದ ವಕ್ತಾರ ದೇವೇಗೌಡ ತೆಲ್ಲೂರು ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡ ತೆಲ್ಲೂರು, ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿ ಪಕ್ಷದ ಬಹುತೇಕ ಶಾಸಕರು ಭಾಗವಹಿಸಿ ಎಚ್‌ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದಿದ್ದಾರೆ.

ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾದ ಮೇಲೆ ಪಕ್ಷದ ಸಂಘಟನೆ ಕೆಟ್ಟು ಹೋಯಿತು. ಇದರಿಂದಾಗಿ 37 ಶಾಸಕರನ್ನು ಹೊಂದಿದ್ದ ಪಕ್ಷವು ಈಗ 19 ಸ್ಥಾನಗಳಿಗೆ ಕುಸಿದಿದೆ. ಪಕ್ಷದ ವರಿಷ್ಠರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಕುರಿತು ಇಬ್ರಾಹಿಂ ಅವರಿಗೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದರೂ ಸಹ ಈಗ ವರಿಷ್ಠರ ವಿರುದ್ಧ ಮಾತನಾಡುತ್ತಿರುವುದು ಖಂಡನಾರ್ಹ. ಕೂಡಲೇ ವಿರೋಧಿ ಹೇಳಿಕೆಗಳನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಸಿ.ಎಂ. ಇಬ್ರಾಹಿಂ ಅವರ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನೀವು ಹೇಳುವ ಹಾಗೆ ಚನ್ನಪಟ್ಟಣದಲ್ಲಿ ನಿಮ್ಮ ನೇತೃತ್ವದಲ್ಲಿ ಮುಸ್ಲಿಮರು ಮತ ಹಾಕಿರುವುದರಿಂದ ಕುಮಾರಣ್ಣನವರು 20 ಸಾವಿರ ಮತದಿಂದ ಆರಿಸಿ ಬಂದಿದ್ದಾರೆ ಎಂದು ಹೇಳಿದ್ದಿರ. 2018ರ ಚುನಾವಣೆಯಲ್ಲಿ ಕುಮಾರಣ್ಣನವರು 1 ಲಕ್ಷ ಮತಗಳ ಅಂತರದಿಂದ ಗೆಲುವು ಕಂಡಿದ್ದರು, ಆಗ ನೀವು ನಮ್ಮ ಪಕ್ಷದಲ್ಲಿ ಇರಲೇ ಇಲ್ಲ ಎಂದು ಹೇಳಿದ್ದಾರೆ.

ಇಬ್ರಾಹಿಂ ಅವರನ್ನು ರಾಜ್ಯಕ್ಕೆ ಪರಿಚಯಿಸಿದ್ದೇ ದೇವೆಗೌಡರು. ಮೂಲೆಯಲ್ಲಿದ್ದ ಅವರನ್ನು ತಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನಾಗಿ ಮಾಡಿದರು. ಈಗ ಉಂಡ ಮನೆಗೆ ದ್ರೋಹ ಬಗೆಯುವ ಕಾರ್ಯ ಅವರು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಅವರು, ಪುತ್ರವ್ಯಾಮೋಹ ಇದ್ದರೆ ದೇವೆಗೌಡರು ಆಗಲೇ ಅವರ ಪುತ್ರರನ್ನು ಕೇಂದ್ರ ಸಚಿವರನ್ನಾಗಿ ಮಾಡುತ್ತಿದ್ದರು ಎಂದು ತಿರುಗೇಟು ನೀಡಿದರು.

ಪಕ್ಷಕ್ಕೆ ಸಿ.ಎಂ. ಇಬ್ರಾಹಿಂ ಅವರಂತಹವರ ಅವಶ್ಯಕತೆ ಇಲ್ಲ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾಖಾನ್ ಅವರಂತಹ ಒಳ್ಳೆಯ ಸಚ್ಚಾರಿತ್ರ್ಯದ ಜಾತ್ಯಾತೀತ ನಾಯಕರ ಅಗತ್ಯವಿದೆ. ಇಬ್ರಾಹಿಂ ಹಾಗೂ ಅವರ ಬೆಂಬಲಿಗರು ಪಕ್ಷ ಬಿಟ್ಟು ಹೋದ ನಂತರ ರಾಜ್ಯದ ಹಾಗೂ ಜಿಲ್ಲಾ ಕಚೇರಿಗಳನ್ನು ತೊಳೆದೇ ಸಾರಿಸುತ್ತೇವೆ. ಇನ್ನು ಮುಂದೆ ಪಕ್ಷದ ವರಿಷ್ಠರ ವಿರುದ್ಧ ಹೇಳಿಕೆ ಕೊಡಬಾರದು. ಒಂದು ವೇಳೆ ಮುಂದುವರೆಸಿದರೆ ಇಬ್ರಾಹಿಂ ಅವರಿಗೆ ಕಪ್ಪು ಬಾವುಟ ತೋರಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com