ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಆಪರೇಷನ್ ಕಮಲ ಆರೋಪ ಸುಳ್ಳು: ಕಾಂಗ್ರೆಸ್ ಸರ್ಕಾರ ಬಿದ್ದರೆ ಡಿಕೆ ಶಿವಕುಮಾರ್ ಕಾರಣ - ರಮೇಶ್ ಜಾರಕಿಹೊಳಿ

2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದವರು ಮತ್ತೊಮ್ಮೆ ಸಕ್ರಿಯರಾಗಿದ್ದಾರೆ ಎಂಬ ಕಾಂಗ್ರೆಸ್ ಆರೋಪವನ್ನು ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ರಮೇಶ ಜಾರಕಿಹೊಳಿ ತಳ್ಳಿಹಾಕಿದ್ದಾರೆ.
Published on

ಬೆಳಗಾವಿ: 2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದವರು ಮತ್ತೊಮ್ಮೆ ಸಕ್ರಿಯರಾಗಿದ್ದಾರೆ ಎಂಬ ಕಾಂಗ್ರೆಸ್ (Congress) ಆರೋಪವನ್ನು ಬಿಜೆಪಿ (BJP) ಶಾಸಕ ಮತ್ತು ಮಾಜಿ ಸಚಿವ ರಮೇಶ ಜಾರಕಿಹೊಳಿ (Ramesh Jarkiholi) ತಳ್ಳಿಹಾಕಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಸಮ್ಮಿಶ್ರ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್‌ನಲ್ಲಿದ್ದ ರಮೇಶ್ ಜಾರಕಿಹೊಳಿ, ಆಪರೇಷನ್ ಕಮಲದ ಬಗ್ಗೆ ಬಿಜೆಪಿ ಎಂದಿಗೂ ಮಾತನಾಡುತ್ತಿಲ್ಲ. ಆದರೆ ಅದರ ಬದಲಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಅವರ 'ನಾಟಕ ಕಂಪನಿ'ಯವರೇ ಮಾತನಾಡುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರ ಬಿದ್ದರೆ ಅದಕ್ಕೆ ಡಿಕೆ ಶಿವಕುಮಾರ್ ಕಾರಣ ಎಂದು ಹೇಳಿದ್ದಾರೆ.

ಆಪರೇಷನ್ ಕಮಲ ಮತ್ತು ಶಾಸಕರಿಗೆ 50 ಕೋಟಿ ಆಮಿಷ ನೀಡುತ್ತಿರುವ ಬಗ್ಗೆ ಮಾತನಾಡುತ್ತಿರುವುದು ಡಿ ಕೆ ಶಿವಕುಮಾರ್ ಅವರ ನಾಟಕ ಕಂಪನಿಯವರು. ನಾವು ಬಿಜೆಪಿಯವರು 'ಆಪರೇಷನ್ ಕಮಲ'ದ ಬಗ್ಗೆ ಮಾತನಾಡುವುದಿಲ್ಲ. ಅದನ್ನು ಮಾಡುವುದಿಲ್ಲ ಎಂದು ಹೇಳಿದರು, 'ಆಪರೇಷನ್ ಕಮಲ' ಎಂಬ ಪದವನ್ನು ಕಾಂಗ್ರೆಸ್ ಸೃಷ್ಟಿಸಿದೆ ಎಂದು ಹೇಳಿದರು.

ಈ ಹಿಂದೆ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಅಗತ್ಯವಿತ್ತು ಎಂದು ಒಪ್ಪಿಕೊಂಡ ಜಾರಕಿಹೊಳಿ, 2019ರಲ್ಲಿ ಅಗತ್ಯವಿತ್ತು. ಹಾಗಾಗಿ ನಾವು ಅಂದು ಅದನ್ನು ಮಾಡಿದ್ದೇವು. ಅದೂ ಬಿಜೆಪಿಯವರಲ್ಲ, ಜಾರಕಿಹೊಳಿ ಅಂಡ್ ಕಂಪನಿ ಮಾಡಿದ್ದು, ಬಿಜೆಪಿಯವರು ನಮಗೆ ಹಣ ನೀಡಿಲ್ಲ, ಆಮಿಷವೊಡ್ಡಿಲ್ಲ ಎಂದು ಹೇಳಿದರು.

ಡಿಕೆ ಶಿವಕುಮಾರ್ ಅವರ ಸರ್ವಾಧಿಕಾರಿ ಧೋರಣೆಯಿಂದಾಗಿ ನಾವು ಬಂಡಾಯವೆದ್ದು ಸರ್ಕಾರವನ್ನು ಉರುಳಿಸಿದೆವು. ನಾವು ಎಂದಿಗೂ ಸಿದ್ದರಾಮಯ್ಯ ಅಥವಾ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಲ್ಲ. ನಾವು ಡಿಕೆ ಶಿವಕುಮಾರ್ ಅವರನ್ನು ವಿರೋಧಿಸಿದ್ದೇವು. ಇಂದು ಡಿಕೆ ಶಿವಕುಮಾರ್ ಅವರ ಬೆಂಬಲಿಗರು ಏನೇನೋ ಹೇಳುತ್ತಾರೆ. ಆದರೆ ಅವರ ಹೇಳಿಕೆಗಳಲ್ಲಿ ಯಾವುದೇ ಆಧಾರವಿಲ್ಲ ಎಂದು ಜಾರಕಿಹೊಳಿ ಹೇಳಿದರು.

ತಮ್ಮ ಸುಳ್ಳು ಮತ್ತು ಸುಳ್ಳು ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಸುಳ್ಳುಗಳನ್ನು ಹಬ್ಬಿಸುತ್ತಿದೆ ಎಂದು ಕಿಡಿಕಾರಿದರು.

ಇನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಳೆದ ತಿಂಗಳು ಬಿಜೆಪಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡ ನಂತರವೇ ಅವರನ್ನು ಭೇಟಿ ಮಾಡಿದ್ದೇನೆ. ಅದಕ್ಕಿಂತ ಮೊದಲು ಅಲ್ಲ. ಸೀಟು ಹಂಚಿಕೆ ನಿರ್ಧಾರಕ್ಕೆ ನಾವು ಒಟ್ಟಿಗೆ ಮಾತನಾಡಬೇಕಿದೆ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com