ಸಂಸತ್ ಸದಸ್ಯತ್ವ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ: ಹೈಕೋರ್ಟ್ ಆದೇಶ

ಹಾಸನ ಲೋಕಸಭಾ ಕ್ಷೇತ್ರ ಸಂಸದ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅಸಿಂಧು ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಘೋಷಿಸಿದೆ.
ಪ್ರಜ್ವಲ್ ರೇವಣ್ಣ
ಪ್ರಜ್ವಲ್ ರೇವಣ್ಣ

ಬೆಂಗಳೂರು: ಜೆಡಿಎಸ್‌ಗೆ ಭಾರೀ ಹಿನ್ನಡೆ ಮತ್ತು ಮುಖಭಂಗವಾಗುವ ಪ್ರಕರಣ ಎಂದು ಹೇಳಬಹುದಾಗಿದ್ದು, ಹಾಸನ ಲೋಕಸಭಾ ಕ್ಷೇತ್ರ ಸಂಸದ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅಸಿಂಧು ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಘೋಷಿಸಿದೆ. ಪ್ರಜ್ವಲ್ ರೇವಣ್ಣ ಅವರು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರ ಮೊಮ್ಮಗನಾಗಿದ್ದು, ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಾರದರ್ಶಕ ರೀತಿಯಲ್ಲಿ ನಾಮಪತ್ರ ಸಲ್ಲಿಸಿಲ್ಲ, ಚುನಾವಣಾ ಅಕ್ರಮ ಎಸಗಿದ್ದಾರೆ, ಹೀಗಾಗಿ ಅವರ ಆಯ್ಕೆ ಅಸಿಂಧು ಎಂದು ಹೇಳಿದೆ. 

2019 ರ ಏಪ್ರಿಲ್ 18 ರಂದು ಪ್ರಜ್ವಲ್ ಅವರ ಸಂಸದ ಆಯ್ಕೆಯನ್ನು ಪ್ರಶ್ನಿಸಿ ಬಿಜೆಪಿಯಿಂದ ಸೋತ ಅಭ್ಯರ್ಥಿ ಎ ಮಂಜು ಮತ್ತು ಕ್ಷೇತ್ರದ ಮತದಾರರಾದ ಜಿ ದೇವರಾಜೇಗೌಡ ಅವರು ಸಲ್ಲಿಸಿದ ಎರಡು ಅರ್ಜಿಗಳ ಸರಣಿ ವಿಚಾರಣೆಯ ನಂತರ ನ್ಯಾಯಮೂರ್ತಿ ಕೆ ನಟರಾಜನ್ ಅವರು ಇಂದು ಆದೇಶವನ್ನು ಪ್ರಕಟಿಸಿದರು.

ನಾಮಪತ್ರ ಸಲ್ಲಿಸುವಾಗ ಭಾರತೀಯ ಚುನಾವಣಾ ಆಯೋಗವು ಸೂಚಿಸಿದ ಮಾದರಿಯಲ್ಲಿ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಬಹಿರಂಗಪಡಿಸದಿರುವ ಆಧಾರದ ಮೇಲೆ ಪ್ರಜ್ವಲ್ ಅವರ ಆಯ್ಕೆಯನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಇದು ಭ್ರಷ್ಟಾಚಾರದಲ್ಲಿ ತೊಡಗುವಿಕೆಗೆ ಸಮಾನವಾಗಿದೆ ಎಂದು ಆಕ್ಷೇಪ ಎತ್ತಿದ್ದರು. 

ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ, ಪ್ರಜ್ವಲ್ ರೇವಣ್ಣ ಅವರು ತಮ್ಮ ಮಾಲೀಕತ್ವದ ಜಮೀನು, ಬ್ಯಾಂಕ್ ಖಾತೆಗಳು, ಪಾಲುದಾರಿಕೆ ಸಂಸ್ಥೆಯ ನಿರ್ದೇಶಕರು, ನಿಶ್ಚಿತ ಠೇವಣಿ, ಹೆಚ್ಚುವರಿ ಖರ್ಚು ಸೇರಿದಂತೆ ಹಲವು ವಿವರಗಳನ್ನು ಅಫಿಡವಿಟ್‌ ಸಲ್ಲಿಸುವಾಗ ನಿಜ ವಿವರ ನೀಡದೆ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂದು ಹೇಳಿದರು. ನಾಮಪತ್ರದ ಜೊತೆ ಸಲ್ಲಿಸುವ ಪ್ರಮಾಣಪತ್ರ ಸಲ್ಲಿಸುವಲ್ಲಿ, ಇದು ಭ್ರಷ್ಟಾಚಾರದಲ್ಲಿ ತೊಡಗುವಿಕೆಗೆ ಸಮಾನವಾಗಿದೆ ಸಮಾನವಾಗಿದೆ. ಆದ್ದರಿಂದ ನ್ಯಾಯಾಲಯವು ಅವರ ಚುನಾವಣೆ ಪ್ರಕ್ರಿಯೆ ಮತ್ತು ಆಯ್ಕೆಯನ್ನು ಅನೂರ್ಜಿತ ಎಂದು ಘೋಷಿಸಿದೆ. 

ಈ ಹಿಂದೆ ಕರ್ನಾಟಕ ಹೈಕೋರ್ಟ್ ತಾಂತ್ರಿಕ ಕಾರಣ ನೀಡಿ ಚುನಾವಣಾ ಅರ್ಜಿಯನ್ನು ವಜಾಗೊಳಿಸಿತ್ತು. ಅರ್ಜಿದಾರರಲ್ಲಿ ಒಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸುವಂತೆ ಅದು ಹೈಕೋರ್ಟ್‌ಗೆ ಸೂಚಿಸಿತು. ಕ್ಷೇತ್ರದ ಮತದಾರರಾದ ಜಿ ದೇವರಾಜೇಗೌಡ ಮತ್ತು ಬಿಜೆಪಿಯ ಪರಾಜಿತ ಅಭ್ಯರ್ಥಿ (2019 ರ ಲೋಕಸಭಾ ಚುನಾವಣೆ) ಎ ಮಂಜು ಅವರು ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಭಾಗಶಃ ಅಂಗೀಕರಿಸಿದ ನ್ಯಾಯಮೂರ್ತಿ ಕೆ ನಟರಾಜನ್ ಅವರು ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯ ನಿಯಮಗಳ ಪ್ರಕಾರ ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಆದೇಶ ನೀಡಿದ್ದಾರೆ. 

ಬಿಜೆಪಿ ಟಿಕೆಟ್‌ನಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಮಂಜು, ನಂತರ ಜೆಡಿಎಸ್‌ಗೆ ಸೇರ್ಪಡೆಗೊಂಡು ಪ್ರಸ್ತುತ ಶಾಸಕರಾಗಿದ್ದಾರೆ. ರೇವಣ್ಣ ಸಹ ಚುನಾವಣಾ ಅಕ್ರಮದಲ್ಲಿ ತೊಡಗಿದ್ದು, ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರ ನೀಡಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಎ ಮಂಜುಗೂ ನೊಟೀಸ್: ನ್ಯಾಯಮೂರ್ತಿ ಕೆ ನಟರಾಜನ್ ಅವರು ಶುಕ್ರವಾರ ನ್ಯಾಯಾಲಯದಲ್ಲಿ ತಮ್ಮ ತೀರ್ಪಿನ ಆಪರೇಟಿವ್ ಭಾಗವನ್ನು ನಿರ್ದೇಶಿಸಿದರು. ಅರ್ಜಿದಾರರು ಸಲ್ಲಿಸಿದ ಎರಡೂ ಚುನಾವಣಾ ಅರ್ಜಿಗಳನ್ನು ಭಾಗಶಃ ಅನುಮತಿಸಲಾಗಿದೆ. ಆದರೆ, ಮಂಜು ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸುವಂತೆ ಕೇಳಿದ್ದ ಅರ್ಜಿದಾರರ ಮನವಿಯನ್ನು ತಳ್ಳಿಹಾಕಿದ ಹೈಕೋರ್ಟ್, ಮಂಜು ಅವರೇ ‘ಅಕ್ರಮದಲ್ಲಿ ತೊಡಗಿರುವ ಕಾರಣ’ ಅವರಿಗೂ ನೊಟೀಸ್ ನೀಡಿದೆ. 

ಚುನಾವಣೆ ವೇಳೆ ಭ್ರಷ್ಟ ಕೃತ್ಯ ಎಸಗಿದ್ದಕ್ಕಾಗಿ ಹೆಚ್ ಡಿ ರೇವಣ್ಣ ಮತ್ತು ಸೂರಜ್ ರೇವಣ್ಣ ವಿರುದ್ಧ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ದೂರಿನಲ್ಲಿ ಹೆಸರಿಸಲಾಗಿದ್ದು, ಭ್ರಷ್ಟಾಚಾರದಲ್ಲಿ ತೊಡಗಿರುವ ಎ ಮಂಜು ಅವರ ಹೆಸರೂ ಇದೆ. ಚುನಾವಣಾ ಆಯೋಗವು ನೋಟಿಸ್ ಜಾರಿ ಮಾಡುವುದು ಮತ್ತು ಚುನಾವಣಾ ಪ್ರಕ್ರಿಯೆಯ ನಿಯಮಗಳನ್ನು ಪಾಲಿಸಬೇಕು ಎಂದು ಹೈಕೋರ್ಟ್ ಹೇಳಿದೆ. ಪ್ರಜ್ವಲ್ ಅವರ ಆಸ್ತಿ ಘೋಷಣೆ ಮಾಡದಿರುವ ಹಾಗೂ ಅಕ್ರಮಗಳ ಹಲವಾರು ಉದಾಹರಣೆಗಳನ್ನು ಅರ್ಜಿಗಳು ಉಲ್ಲೇಖಿಸಿದ್ದವು.

ಚೆನ್ನಾಂಬಿಕಾ ಕನ್ವೆನ್ಷನಲ್ ಹಾಲ್ ಕನಿಷ್ಠ 5 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಆದರೆ ಪ್ರಜ್ವಲ್ ಕೇವಲ 14 ಲಕ್ಷ ರೂಪಾಯಿ ಎಂದು ಘೋಷಿಸಿದ್ದಾರೆ. ಇನ್ನೊಂದು ಉದಾಹರಣೆಯೆಂದರೆ, ಖಾತೆಯಲ್ಲಿ ಬ್ಯಾಂಕ್ ಬ್ಯಾಲೆನ್ಸ್ 5 ಲಕ್ಷ ಎಂದು ಘೋಷಿಸಲಾಗಿದೆ ಆದರೆ 48 ಲಕ್ಷ ರೂಪಾಯಿ ಠೇವಣಿ ಇದೆ ಎಂದು ಆರೋಪಿಸಲಾಗಿದೆ. ಸಂಸದರು ಬೇನಾಮಿಗಳ ಹೆಸರಿನಲ್ಲಿ ಹಲವಾರು ಆಸ್ತಿಗಳನ್ನು ಹೊಂದಿದ್ದಾರೆ. ಅವರು ಆದಾಯ ತೆರಿಗೆ ವಂಚನೆಯನ್ನೂ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೇಲ್ಮನವಿಗೆ ಸಿದ್ಧತೆ: ಸಂಸತ್ ಸದಸ್ಯ ಸ್ಥಾನದಿಂದ ಅನರ್ಹತೆ ಪ್ರಜ್ವಲ್ ರೇವಣ್ಣ ಅವರ ಭವಿಷ್ಯದ ರಾಜಕೀಯ ವೃತ್ತಿಬದುಕಿಗೆ ಹಿನ್ನಡೆಯಾಗಿದ್ದು ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ವಕೀಲರ ಮೂಲಕ ಸಿದ್ಧತೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com