'ಕಾಂಗ್ರೆಸ್‌ ಸೀಮೆಎಣ್ಣೆ ಪಾರ್ಟಿ, ಬಿಜೆಪಿ ಬೆಂಕಿಕಡ್ಡಿ ಪಕ್ಷ; ಸೋನಿಯಾ ಗಾಂಧಿಗೆ ಬೈದ ಸಿದ್ದು ಈಗ ಅವರ ಕೈಕೆಳಗಿದ್ದಾರೆ'

ಕಾಂಗ್ರೆಸ್‌ ಪಕ್ಷವನ್ನು ‘ಸೀಮೆಎಣ್ಣೆ’ ಪಕ್ಷ ಎಂದು ಟೀಕಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಮುಖ ಇಟ್ಟುಕೊಂಡು ಆ ಪಕ್ಷದಲ್ಲಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಪ್ರಶ್ನಿಸಿದರು.
ಜಿ.ಟಿ ದೇವೇಗೌಡ
ಜಿ.ಟಿ ದೇವೇಗೌಡ

ಬೆಂಗಳೂರು: ಕಾಂಗ್ರೆಸ್‌ ಪಕ್ಷವನ್ನು ‘ಸೀಮೆಎಣ್ಣೆ’ ಪಕ್ಷ ಎಂದು ಟೀಕಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಮುಖ ಇಟ್ಟುಕೊಂಡು ಆ ಪಕ್ಷದಲ್ಲಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಜೆಡಿಎಸ್‌ ಉನ್ನತ ನಾಯಕರ ಸಮಿತಿ ಸಭೆಯ ನಂತರ ಅವರು ಮಾತನಾಡಿದರು. ಕಾಂಗ್ರೆಸ್‌ ವಿದೇಶಿ ಪಕ್ಷ. ಸೋನಿಯಾ ಗಾಂಧಿ ಅವರಿಗೆ ಭಾರತದ ಪೌರತ್ವವನ್ನೇ ನೀಡಬಾರದು ಎಂದು ಹೇಳಿದ್ದ ಸಿದ್ದರಾಮಯ್ಯ ಇಂದು ಅವರ ಕಾಲಡಿಗೇ ಶರಣಾಗಿದ್ದಾರೆ. ಅಧಿಕಾರಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ. ಅವರೊಬ್ಬ ಅವಕಾಶವಾದಿ ಎಂದು ಟೀಕಿಸಿದರು.

ರಾಜ್ಯದಲ್ಲಿ ಭಾರಿ ಬಹುಮತ ಪಡೆದು ಅಧಿಕಾರಕ್ಕೆ ಬಂದರೂ ಬೇರೆ ಪಕ್ಷದ ಶಾಸಕರು, ನಾಯಕರನ್ನು ಪಕ್ಷಕ್ಕೆ ಸೆಳೆಯುವ ಯಾವ ನಾಯಕರನ್ನೂ ನೋಡಿಲ್ಲ. ಅವರು ಎಷ್ಟೇ ಪ್ರಯತ್ನ ಮಾಡಿದರೂ ಜೆಡಿಎಸ್‌ನ ಒಬ್ಬ ಶಾಸಕರನ್ನೂ ಸೆಳೆಯಲು ಸಾಧ್ಯವಿಲ್ಲ ಎಂದರು.

ಕುಮಾರಸ್ವಾಮಿ ಅವರನ್ನು ಸಿಎಂ ಹುದ್ದೆಯಿಂದ ಕೆಳಗೆ ಇಳಿಸಿದ್ದು ಯಾರು? ಯಾರ ಜೊತೆಗೆ ನೀವು ಸೇರಿಕೊಂಡ್ರಿ? ಯಡಿಯೂರಪ್ಪ ‌ಮುಖ್ಯಮಂತ್ರಿ ಆಗಲು ಅವರ ಜೊತೆಗೆ ಸೇರಿರಲಿಲ್ಲವಾ? 1983ರಲ್ಲಿ ನಿಮ್ಮನ್ನ ಗೆಲ್ಲಿಸಿದ ಸಮುದಾಯ ಯಾವುದು? ಗೆಲ್ಲಿಸಿದವರ ಹೆಸರನ್ನೂ ನೀವು ಹೇಳಲಿಲ್ಲ, ನೆನಪು ಸಹ ‌ಮಾಡಿಕೊಂಡಿಲ್ಲ. ನೀವು ಯಾರಿಗೂ ಅಗೌರವ ತೋರಿಸಬೇಡಿ ಎಂದು ಗುಡುಗಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ವಿರೋಧ ಪಕ್ಷದ ಶಾಸಕರ ಕ್ಷೇತ್ರಕ್ಕೂ ತಲಾ 25 ಕೋಟಿ ರೂ. ಅನುದಾನ ನೀಡಿದ್ದರು. ಆದರೆ, ಸಿದ್ದರಾಮಯ್ಯ ವಿರೋಧ ಪಕ್ಷದ ಶಾಸಕರನ್ನು ಕಡೆಗಣಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಭಾರಕ್ಕೆ ಸರ್ಕಾರದ ಆರ್ಥಿಕ ಪರಿಸ್ಥಿತಿ ನಲುಗಿದೆ. ಜೆಡಿಎಸ್‌ ಅಧಿಕಾರಕ್ಕೆ ಬಂದಿದ್ದರೆ ಪಂಚರತ್ನದ ಮೂಲಕ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡುತ್ತಿತ್ತು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com