ಮೈಸೂರು: ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ಒಂದು ರಾಷ್ಟ್ರ, ಒಂದು ಚುನಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಹತಾಶರಾಗಿದ್ದಾರೆ ಎಂದು ಸೋಮವಾರ ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಕೆಲವು ರಾಜ್ಯಗಳಲ್ಲಿ ಇತ್ತೀಚೆಗಷ್ಟೇ ವಿಧಾನಸಭಾ ಚುನಾವಣೆ ನಡೆದು ಸರ್ಕಾರಗಳು ಅಸ್ತಿತ್ವಕ್ಕೆ ಬಂದಿವೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಎಲ್ಲ ರಾಜ್ಯ ವಿಧಾನಸಭೆಗಳನ್ನು ವಿಸರ್ಜಿಸಲು ಸಾಧ್ಯವಿದೆಯೇ ಅಥವಾ ಚುನಾವಣೆ ನಡೆಯುವವರೆಗೂ ರಾಷ್ಟ್ರಪತಿ ಅಧಿಕಾರ ಹೇರಲು ಸಾಧ್ಯವಿದೆಯೇ? ಇಂತಹ ಸಂದರ್ಭಗಳು ಉದ್ಭವಿಸುವ ಸಾಧ್ಯತೆಯಿಂದಾಗಿ ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿಗೊಳಿಸುವುದು ಅಸಾಧ್ಯ ಎಂದಿದ್ದಾರೆ.
ಒಂದು ರಾಷ್ಟ್ರ, ಒಂದು ಚುನಾವಣೆ ಯೋಚನೆಯೇ ಅವೈಜ್ಞಾನಿಕ. "ಕೆಲವು ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಇರುತ್ತದೆ. ಕೆಲವೆಡೆ ಸರ್ಕಾರದ ಅವಧಿಯ ಒಂದು ಭಾಗ ಪೂರ್ಣಗೊಂಡಿರುತ್ತೆ. ಕರ್ನಾಟಕದಲ್ಲಿ ಈಗಷ್ಟೇ ಚುನಾವಣೆ ಆಗಿದೆ. ಈಗ ರಾಜ್ಯ ವಿಧಾನಸಭೆ ವಿಸರ್ಜಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಪ್ರಧಾನಿ ಮೋದಿ ಹತಾಶರಾಗಿದ್ದು, ನಾಲ್ಕೈದು ತಿಂಗಳು ಕಳೆದರೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
Advertisement