ಅಸಮಾಧಾನಿತ ಹರಿಪ್ರಸಾದ್ ರಾಜ್ಯ ಪ್ರವಾಸ: ಹೈಕಮಾಂಡ್ ಮಧ್ಯ ಪ್ರವೇಶಿಸದಿದ್ದರೇ ಸಿಎಂಗೆ ಮತ್ತಷ್ಟು ಪ್ರಯಾಸ!

ಸಿದ್ದರಾಮಯ್ಯ ಸಂಪುಟದಿಂದ ಹೊರಗುಳಿದ ಹಿನ್ನೆಲೆಯಲ್ಲಿ ಆಸಮಾಧಾನಗೊಂಡಿರುವ ಕಾಂಗ್ರೆಸ್‌ನ ಹಿರಿಯ ಎಂಎಲ್‌ಸಿ ಬಿಕೆ ಹರಿಪ್ರಸಾದ್‌ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ.
ಬಿ.ಕೆ ಹರಿಪ್ರಸಾದ್
ಬಿ.ಕೆ ಹರಿಪ್ರಸಾದ್

ಬೆಂಗಳೂರು: ಸಿದ್ದರಾಮಯ್ಯ ಸಂಪುಟದಿಂದ ಹೊರಗುಳಿದ ಹಿನ್ನೆಲೆಯಲ್ಲಿ ಆಸಮಾಧಾನಗೊಂಡಿರುವ ಕಾಂಗ್ರೆಸ್‌ನ ಹಿರಿಯ ಎಂಎಲ್‌ಸಿ ಬಿಕೆ ಹರಿಪ್ರಸಾದ್‌ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ.

ಶನಿವಾರ  ಅರಮನೆ ಮೈದಾನದಲ್ಲಿ ನಡೆದ ಈಡಿಗ ಸಮುದಾಯದ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಮುದಾಯದ ಧಾರ್ಮಿಕ ಮುಖಂಡ ಪ್ರಣವಾನಂದ ಸ್ವಾಮೀಜಿ ಅವರು ಹರಿಪ್ರಸಾದ್ ಅವರಿಗಾಗಿ ಕಾರ್ಯಕ್ರಮ ಆಯೋಜಿಸಿದ್ದರು. ಹಿಂದುಳಿದ ವರ್ಗಗಳಿಗೆ ರಾಜಕೀಯವಾಗಿ ಸಲ್ಲಬೇಕಾದದ್ದನ್ನು ಪಡೆಯಲು ಸಮುದಾಯ ಒಗ್ಗೂಡಿರುವುದಾಗಿ ತಿಳಿಸಿದರು.

ಭಾನುವಾರ ಕೊಪ್ಪಳ ಜಿಲ್ಲೆಯ ತಳಬಾಳದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹರಿಪ್ರಸಾದ್ ಭಾಗವಹಿಸಿದ್ದರು.  ಸಿದ್ದರಾಮಯ್ಯ ಬೆಂಬಲಿಗ ಮಾಲೂರು ಶಾಸಕ ಕೆ.ವೈ.ನಂಜೇಗೌಡ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪಕ್ಷ ಹಾಗೂ ಸಿಎಂ ವಿರುದ್ಧ ಹೇಳಿಕೆ ನೀಡಿರುವ ಹರಿಪ್ರಸಾದ್ ವಿರುದ್ಧ ಕಾಂಗ್ರೆಸ್ ವರಿಷ್ಠರಿಗೆ ದೂರು ನೀಡುವುದಾಗಿ ಶಾಸಕ ನಂಜೇಗೌಡ ಎಚ್ಚರಿಸಿದರ ಬಗ್ಗೆ ಪ್ರತಿಕ್ರಿಯಿಸಿದ ಹರಿ ಪ್ರಸಾದ್, ಶಾಸಕ ಒಬ್ಬ ಹಗರಣಗಾರ. ಮೊದಲು  ಅವನುಶುದ್ಧನಾಗಲಿ, ನಂತರ ನನ್ನ ವಿರುದ್ಧ ದೂರು ನೀಡಲಿ ಎಂದು ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.

ಇನ್ನು ಮೂರು ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಹಗಲುಗನಸು ಕಾಣುತ್ತಿದೆ ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ, ಅದಕ್ಕಾಗಿಯೇ ನಾನು ಬಹಿರಂಗವಾಗಿ ಮಾತನಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಏತನ್ಮಧ್ಯೆ, ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ, ಹರಿಪ್ರಸಾದ್ ಅವರು ಪಕ್ಷದ ರಾಜ್ಯ ನಾಯಕರು ಮತ್ತು ಹೈಕಮಾಂಡ್‌ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಹಿರಿಯ ನಾಯಕರಾಗಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ವಿಷಯ ಇತ್ಯರ್ಥವಾಗಲಿದೆ ಎಂದರು. ಆದರೆ ಹರಿಪ್ರಸಾದ್ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಕುತೂಹಲ ಮೂಡಿಸಿದೆ.

ಮೂಲಗಳ ಪ್ರಕಾರ, ಪಕ್ಷದ ಹೈಕಮಾಂಡ್ ಮಧ್ಯಪ್ರವೇಶಿಸದಿದ್ದರೆ, ಸಿದ್ದರಾಮಯ್ಯ ವಿರುದ್ಧ ಸಮಾಜದ ವಿವಿಧ ವರ್ಗಗಳನ್ನು ಒಗ್ಗೂಡಿಸಿ ಹರಿಪ್ರಸಾದ್ ತಮ್ಮ ರಾಜ್ಯ ಪ್ರವಾಸವನ್ನು ಮುಂದುವರೆಸುತ್ತಾರೆ. ಇದೇ ವೇಳೆ, ಸಿಎಂ ವಿರುದ್ಧ ಹರಿಪ್ರಸಾದ್  ಮಾಡುತ್ತಿರುವ ವಾಗ್ದಾಳಿಯನ್ನು ಪಕ್ಷ ಗಮನಿಸುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಸೂಕ್ತ ಸಮಯದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com