ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ಅಪಸ್ವರ: ಆಡಳಿತ ಪಕ್ಷದಲ್ಲಿ ಆತಂಕ!

ನಾಲ್ಕು ತಿಂಗಳ ಹಿಂದೆ ರಾಜ್ಯದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಸುಗಮವಾಗಿ ಸಾಗುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಪಕ್ಷದೊಳಗಿನ ಬೆಳವಣಿಗೆಗಳನ್ನು ಅವಲೋಕಿಸಿದರೆ ವ್ಯತಿರಿಕ್ತ ವಾತಾವರಣ ಕಂಡುಬರುತ್ತಿದೆ. 
ಬಿ ಕೆ ಹರಿಪ್ರಸಾದ್
ಬಿ ಕೆ ಹರಿಪ್ರಸಾದ್

ಮಂಡ್ಯ: ನಾಲ್ಕು ತಿಂಗಳ ಹಿಂದೆ ರಾಜ್ಯದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಸುಗಮವಾಗಿ ಸಾಗುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಪಕ್ಷದೊಳಗಿನ ಬೆಳವಣಿಗೆಗಳನ್ನು ಅವಲೋಕಿಸಿದರೆ ವ್ಯತಿರಿಕ್ತ ವಾತಾವರಣ ಕಂಡುಬರುತ್ತಿದೆ. 

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದ ಹಿನ್ನೆಲೆಯಲ್ಲಿ ಹಿರಿಯ ನಾಯಕ, ಗಾಂಧಿ ಕುಟುಂಬದ ನಿಷ್ಠಾವಂತ ಬಿ.ಕೆ.ಹರಿಪ್ರಸಾದ್ ಅವರು ಬಂಡಾಯದ ಬಾವುಟ ಹಾರಿಸಿದ್ದು, ಬಹಿರಂಗಾಗಿಯೇ ಟೀಕೆ ಮಾಡುತ್ತಿರುವುದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷಕ್ಕೆ ಬಿಸಿ ತುಪ್ಪವಾಗಿದೆ.  

ಪ್ರತಿನಿತ್ಯ ಸಿದ್ದರಾಮಯ್ಯನವರನ್ನು ಗುರಿಯಾಗಿಸಿಕೊಂಡು ಬಿ ಕೆ ಹರಿಪ್ರಸಾದ್ ಮುಸುಕಿನ ಗುದ್ದಾಟ ನಡೆಸುತ್ತಿದ್ದು, ರಾಜ್ಯದಲ್ಲಿ ಪಕ್ಷಕ್ಕೆ ಭಾರೀ ಮುಖಭಂಗವಾಗಿದೆ. ಹರಿಪ್ರಸಾದ್ ಅವರು ಈಗ ಹಿಂದುಳಿದ ವರ್ಗಗಳನ್ನು ಅದರಲ್ಲೂ ವಿಶೇಷವಾಗಿ ತಾವು ಪ್ರತಿನಿಧಿಸುವ ಈಡಿಗ ಸಮುದಾಯವನ್ನು ಒಗ್ಗೂಡಿಸಲು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.

ಇತ್ತೀಚೆಗಷ್ಟೇ ನಡೆದ ಎರಡು ಸಮಾವೇಶಗಳಲ್ಲಿ ಸಿಎಂ ಹೆಸರನ್ನು ಹೇಳದೆ ಹರಿಪ್ರಸಾದ್, ಅವರನ್ನು ಅಧಿಕಾರದ ದೊರೆ, ಪಕ್ಷಾಂತರಿ ಎಂದು ಕರೆದು ಸಮಾಜವಾದಿ ಗುಣವನ್ನೂ ಗೇಲಿ ಮಾಡಿ ಸಿದ್ದರಾಮಯ್ಯ ಮಾತ್ರವಲ್ಲದೆ ಪಕ್ಷದ ನಿಷ್ಠಾವಂತರಿಗೂ ಮುಜುಗರ ಉಂಟು ಮಾಡಿದ್ದರು. ಅದೇ ಸಮಯದಲ್ಲಿ, ಸಿದ್ದರಾಮಯ್ಯ ಸಂಪುಟ ಪ್ರವೇಶಿಸಲು ಸಾಧ್ಯವಾಗದ ನಾಯಕರಿಂದ ಇದೇ ರೀತಿಯ ಭಿನ್ನಾಭಿಪ್ರಾಯದ ಧ್ವನಿಗಳು ಕೇಳಿಬರುತ್ತಿವೆ. 

ಕೆಲವು ಸಚಿವರ ಕಾರ್ಯವೈಖರಿ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನಕ್ಕಾಗಿ ತಮ್ಮ ಬಳಿಗೆ ಬರುವ ಪಕ್ಷದ ಶಾಸಕರ ಬಗ್ಗೆ ಅವರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವರಲ್ಲಿ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಮೊದಲಿಗರು.

ಪಕ್ಷದ ಮುಖಂಡ ಬಸವರಾಯ ರೆಡ್ಡಿ ಕೂಡ ಶಾಸಕರ ಬಗ್ಗೆ ಕೆಲವು ಸಚಿವರ ಅಸಡ್ಡೆ ವಿರುದ್ಧ ದನಿ ಎತ್ತಿದ್ದರು. ಕೆಲವು ಇಲಾಖೆಗಳಲ್ಲಿ ಆಗಿರುವ ಲೋಪಗಳ ಬಗ್ಗೆಯೂ ಪ್ರಸ್ತಾಪಿಸಿದರು. ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಗುಸುಗುಸು, ಆಡಳಿತ ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ, ಯಾವಾಗ ಬೇಕಾದರೂ ಸರ್ಕಾರ ಪತನವಾಗಲಿದೆ ಎಂಬ ಕಥಾನಕವನ್ನು ಹರಡಲು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ಗೆ ಆಹಾರ ಒದಗಿಸಿದೆ ಎನ್ನಬಹುದು.
ಈ ಬೆಳವಣಿಗೆಗಳಿಂದ ಅಸಮಾಧಾನಗೊಂಡಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಶಾಸಕರ ಸಭೆ ನಡೆಸಿ ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾರ ಅಸ್ತಿತ್ವಕ್ಕೆ ಬಂದು ಕೇವಲ ನಾಲ್ಕು ತಿಂಗಳಾಗಿರುವುದರಿಂದ 3-4 ನಾಯಕರಿಗೆ ಅವಕಾಶ ಕಲ್ಪಿಸಲು ಸಣ್ಣ ಸಂಪುಟ ಪುನಾರಚನೆಗೆ ಹೋಗಲು ಸಾಧ್ಯವಿಲ್ಲ ಎಂದು ಸಿಎಂ ಮತ್ತು ಡಿಸಿಎಂಗೆ ಚೆನ್ನಾಗಿ ಗೊತ್ತಿದೆ.

ಆದಾಗ್ಯೂ, ಅವರು ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳದಂತೆ ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶಾಸಕರ ಮನವೊಲಿಸುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ. 

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿರುವ ಕಾಂಗ್ರೆಸ್ ನಾಯಕರು ಈ ಬೆಳವಣಿಗೆಗಳು ಆತಂಕಕ್ಕೆ ಕಾರಣವಾಗಿವೆ. ಉದ್ದೇಶಿತ ಬಿಜೆಪಿ-ಜೆಡಿಎಸ್ ಮೈತ್ರಿ ರೂಪುಗೊಂಡರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮೇಲಿನ ದಾಳಿಗೆ ವೇಗ ಸಿಗಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com